ರಾಮು ನಿರ್ದೇಶನದ ಹಾಗೂ ಯುವನಟ ಭರತ್ ಕುಮಾರ್ ಅಭಿನಯದ ಮುಂದಿನ ಚಿತ್ರ 'ಮೆಜೆಸ್ಟಿಕ್ 2'. ಕೆಲ ದಿನಗಳ ಹಿಂದೆ ಸೆಟ್ಟೇರಿರುವ 'ಮೆಜೆಸ್ಟಿಕ್ 2' ಚಿತ್ರದ ಚಿತ್ರಿಕರಣ ಭರದಿಂದ ಸಾಗಿದೆ. ಹೀರೋ ಇಂಟ್ರುಡಕ್ಷನ್ ಸಾಂಗ್ನ ಶೂಟಿಂಗ್ ಆರ್. ಎಸ್ ಗೌಡ ಅವರ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅಣ್ಣಮ್ಮ ದೇವಿ ಜಾತ್ರೆಯ ಅದ್ಧೂರಿ ಸೆಟ್ನಲ್ಲಿ ನಡೆಯುತ್ತಿದೆ. ಈ ಹಾಡಿನಲ್ಲಿ ಕನಸಿನ ರಾಣಿ ಮಾಲಾಶ್ರೀ ಹಾಗೂ ಯುವನಟ ಭರತ್ ಕುಮಾರ್ ಸೇರಿದಂತೆ ನೂರಾರು ಡಾನ್ಸರ್ಸ್ ಅಭಿನಯಿಸುತ್ತಿದ್ದಾರೆ.
ಕೊರಿಯಾಗ್ರಾಫರ್ ತ್ರಿಭುವನ್ ಮಾಸ್ಟರ್ ಡಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. 90ರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ದರ್ಶನ್ ಅಭಿನಯಿಸಿದ್ದ ಮೆಜೆಸ್ಟಿಕ್ ಚಿತ್ರದಲ್ಲಿ ತೋರಿಸಿದ್ದರೆ, ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೆಲ್ಲಾ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೇ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತದೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ಮೆಜೆಸ್ಟಿಕ್ 2 ಚಿತ್ರದಲ್ಲಿ ನಿರ್ದೇಶಕ ರಾಮು ಹೇಳಲು ಹೊರಟಿದ್ದಾರೆ.
ನಟಿ ಮಾಲಾಶ್ರೀ ಮಾತನಾಡಿ, ಇದರಲ್ಲಿ ನನ್ನದು ಒಂದು ಸ್ಪೆಷಲ್ ಎಂಟ್ರಿ. ನಿರ್ದೇಶಕ ರಾಮು ಅವರು ನಮ್ಮ ರಾಮು ಫಿಲ್ಮ್ಸ್ ಬ್ಯಾನರಿನಲ್ಲಿ ಕೆಲಸ ಮಾಡಿದ್ದಾರೆ. ನನ್ನನ್ನು ಕಂಡರೆ ತುಂಬಾ ಅಭಿಮಾನ. ಅವರು ಬಂದು ಮೇಡಂ ನನ್ನ ಮೊದಲ ಸಿನಿಮಾಗೆ ನಿಮ್ಮ ಆಶೀರ್ವಾದ ಬೇಕು. ನೀವು ನನ್ನ ಸಿನಿಮಾದ ಒಂದು ಭಾಗವಾಗಬೇಕು ಎಂದು ಕೇಳಿಕೊಂಡರು. ನಾನು ಸ್ಟೆಪ್ ಹಾಕಿ ಬಹಳ ವರ್ಷಗಳಾಯ್ತು. ಎಲ್ಲ ಮರೆತುಹೋಗಿದೆ ಎಂದೆ. ಆಗ ತ್ರಿಭುವನ್ ಮಾಸ್ಟರ್ ಬಂದು ಮೇಡಂ ನೀವು ಟ್ರೈ ಮಾಡಿ ನಾನಿದ್ದೇನೆ ಎಂದರು. ಇದು ಮಾರಮ್ಮ ದೇವಿ ಸಾಂಗ್. ನನ್ನ ಸ್ಟೆಪ್ಸ್ ನೋಡಿ ನನಗೇ ಬಹಳ ಖುಷಿಯಾಯ್ತು. ಇದು ನಾನೇನಾ ಅನಿಸಿತು. ನನ್ನ ಹಿಂದಿನ ದಿನಗಳನ್ನು ನೆನಪಿಸಿತು. ರಿಯಲಿ ಎಂಜಾಯ್ಡ್ ಎಂದು ಖುಷಿ ಹಂಚಿಕೊಂಡರು.
ನಿರ್ದೇಶಕ ರಾಮು ಮಾತನಾಡಿ, ಈ ಹಾಡಿನ ನಂತರ ಒಂದು ಡ್ಯುಯೆಟ್ ಸಾಂಗ್ ಹಾಗೂ ಆ್ಯಕ್ಷನ್ ಸೀಕ್ವೇನ್ಸ್ ಮಾಡಬೇಕಿದೆ. ಶೂಟಿಂಗ್ ಜೊತೆ ಜೊತೆಗೆ ಎಡಿಟಿಂಗ್ ಕೂಡ ನಡೆಯುತ್ತಿದೆ. ಚಿತ್ರ ನಾವಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿ ಬರುತ್ತಿದೆ ಎಂದರು.
ನಂತರ ನಾಯಕ ನಟ ಭರತ್ ಮಾತನಾಡಿ, ನನ್ನ ಚೊಚ್ಚಲ ಚಿತ್ರದಲ್ಲೇ ಲೆಜೆಂಡರಿ ಸ್ಟಾರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮಾಲಾಶ್ರೀ ಮೇಡಂ ಅವರಿಂದ ಬಹಳಷ್ಟು ಕಲಿತಿದ್ದೇನೆ. ಮೆಜೆಸ್ಟಿಕ್ನಲ್ಲೇ ಹುಟ್ಟಿಬೆಳೆದ ಹುಡುಗನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನ ಮೆಜೆಸ್ಟಿಕ್ ಹೇಗಿದೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ ಎಂದು ಹೇಳಿದರು.