ಕನ್ನಡ ಚಿತ್ರರಂಗದ ಸೂಪರ್ ಹಿಟ್ 'ಶಿವಾಜಿ ಸುರಕ್ಕಲ್' ಡಿಟೆಕ್ಟಿವ್ ಸರಣಿಗಳ ನಿರ್ಮಾಪಕ ಅನುಪ್ ಹನುಮಂತೇಗೌಡ ತಮ್ಮ ಮೂರನೇ ಚಿತ್ರವನ್ನು ನಿರ್ಮಿಸಲು ರೆಡಿಯಾಗಿದ್ದಾರೆ. ಹಿರಿಯ ನಿರ್ದೇಶಕ ಎಸ್ ಮಹೇಂದರ್ ಅವರ ನಿರ್ದೇಶನದಲ್ಲಿ ಅನುಪ್ ಹನುಮಂತೇಗೌಡ ನಿರ್ಮಾಣದ ಮೂರನೇ ಚಿತ್ರ ಮೂಡಿಬರಲಿದೆ. ಜನಪ್ರಿಯ ನಟ ಕಿಶೋರ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಪ್ರಾಜೆಕ್ಟ್ಗೆ "ಆಪರೇಷನ್ ಕೊಂಬುಡಿಕ್ಕಿ'' ಎಂಬ ಶೀರ್ಷಿಕೆ ಇಡಲಾಗಿದೆ.
ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್ನಿಂದ ನಿರ್ಮಾಣ: ಕನ್ನಡ ಚಿತ್ರರಂಗದ ಕಿರಿಯ ಮತ್ತು ಯಶಸ್ವಿ ನಿರ್ಮಾಪಕ ಅನುಪ್ ಹನುಮಂತೇಗೌಡ ಅವರು 'ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್' ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿ 'ಆಪರೇಷನ್ ಕೊಂಬುಡಿಕ್ಕಿ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಬಿಗ್ ಬಜೆಟ್ ಪ್ರೊಜೆಕ್ಟ್ ಆಗಿದೆ.
ನಾಯಕನಾಗಿ ಕಿಶೋರ್: 'ಗಟ್ಟಿಮೇಳ' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಎಸ್ ಮಹೇಂದರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕಿಶೋರ್ ಬಹಳ ವರ್ಷಗಳ ನಂತರ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈವರೆಗೆ ಕೆಲ ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ದಕ್ಷಿಣ ಭಾರತದ ಬಹು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿರುವ ಅಪ್ಪಟ ಕನ್ನಡಿಗ ಕಿಶೋರ್ ನಾಯಕನಾಗಿ ನಟಿಸಲಿರುವ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.