ಕವೀಶ್ ಶೆಟ್ಟಿ ಹಾಗೂ ಮೇಘಾ ಶೆಟ್ಟಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ'. ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ ಟೀಸರ್ ಅನಾವರಣಗೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ತಮ್ಮ ಚಿತ್ರದ ಅನುಭವ ಹಂಚಿಕೊಂಡಿದೆ.
ಮೊದಲು ಮಾತನಾಡಿದ ನಿರ್ದೇಶಕ ಸಡಗರ ರಾಘವೇಂದ್ರ, "ನಾನು ಕನ್ನಡದ ಹೆಸರಾಂತ ನಿರ್ದೇಶಕರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿರುವ ಅನುಭವ ಹೊಂದಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ನನ್ನ ನಿರ್ದೇಶನದ ಚೊಚ್ಚಲ ಚಿತ್ರವಿದು. ನಕ್ಸಲಿಸಂ ಸುತ್ತ ಹೆಣೆದಿರುವ ಕಥೆಯಿದು. ಹಾಗಂತ ನಕ್ಸಲಿಸಂ ಅನ್ನು ವೈಭವೀಕರಿಸಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾದ ಚಿತ್ರವೂ ಇದಲ್ಲ. ಇದು ಆಫ್ಟರ್ ಆಪರೇಷನ್ ಲಂಡನ್ ಕೆಫೆ. ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮತ್ತೊಂದು ಭಾಗದ ಕೆಲಸ ಈಗಾಗಲೇ ಆರಂಭವಾಗಿದೆ. ಕನ್ನಡ ಹಾಗೂ ಮರಾಠಿ ಎರಡೂ ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಣ ನಡೆಸಲಾಗಿದೆ. ಉಳಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ ಕಲಾವಿದರು ಮರಾಠಿ ಕಲಿತು, ಮರಾಠಿ ಕಲಾವಿದರು ಕನ್ನಡ ಕಲಿತು ಅಭಿನಯಿಸಿರುವುದು ಚಿತ್ರದ ವಿಶೇಷ" ಎಂದು ತಿಳಿಸಿದರು.
ನಾಯಕ ನಟ ಕವೀಶ್ ಶೆಟ್ಟಿ ಮಾತನಾಡಿ, "ಮುಂಗಾರು ಮಳೆ 2ರಿಂದ ನನ್ನ ಸಿನಿ ಜರ್ನಿ ಆರಂಭವಾಯಿತು. ನಂತರ 2020ರಲ್ಲಿ ಜಿಲ್ಕಾ ಚಿತ್ರದಲ್ಲಿ ನಟಿಸಿದ್ದೆ. ಸಡಗರ ರಾಘವೇಂದ್ರ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ಮೊದಲ ನಿರ್ದೇಶನದಲ್ಲಿ ನನ್ನದೊಂದು ಚಿತ್ರ ಮಾಡುವ ಆಸೆಯಿತ್ತು. ಈ ಚಿತ್ರದ ಮೂಲಕ ಅದು ಈಡೇರಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಹಿರಿಯ ನಟ ದತ್ತಣ್ಣ ನಟನೆಯ ಕಿರುಚಿತ್ರ 'ಇರುವೆ' ಯೂಟ್ಯೂಬ್ನಲ್ಲಿ ಬಿಡುಗಡೆ - Kannada Short Film Iruve