ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಹಾಗೂ ಭಾರತೀಯ ಚಿತ್ರರಂಗದ ಡ್ಯಾನ್ಸ್ ಕಿಂಗ್ ಪ್ರಭುದೇವ ಇದೇ ಮೊದಲ ಬಾರಿಗೆ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಕರಟಕ ದಮನಕ'. ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಸಿನಿಮಾಗೆ ಕನ್ನಡ ಚಿತ್ರರಂಗದ ವಿಶೇಷ ವ್ಯಕ್ತಿಯ ಬೆಂಬಲ ಸಿಕ್ಕಿದೆ.
'ಅಂಬಿ' ವಿಶೇಷ ವಿಡಿಯೋ: ಇಬ್ಬರು ಸ್ಟಾರ್ ಹೀರೋಗಳ ಕರಟಕ ದಮನಕ ಶೂಟಿಂಗ್ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದ ಟೈಟಲ್ ಹಾಡನ್ನು ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ದಿ.ಅಂಬರೀಶ್ ಅವರ ಹಳೇ ವಿಡಿಯೋ ಬಳಸಿಕೊಂಡು ವಿಶೇಷವಾಗಿ ಅನಾವರಣಗೊಳಿಸಲಾಗಿದೆ.
ಲವ್ ಸ್ಟೋರಿ ಹಾಗೂ ಫಿಲಾಸಫಿ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಯೋಗರಾಜ್ ಭಟ್ ಈ ಬಾರಿ ಹೊಸ ಸಂದೇಶವನ್ನೊಳಗೊಂಡ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭಟ್ ಹೇಳುವ ಹಾಗೆ, ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು "ಕರಟಕ" ಇನ್ನೊಂದರ ಹೆಸರು "ದಮನಕ". ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳುವ ಮೂಲಕ ಸಮಾಜಕ್ಕೆ ಹೇಗೆ ಒಳ್ಳೆಯದು ಮಾಡುತ್ತವೆ ಅನ್ನೋದನ್ನು ತಿಳಿದುಕೊಳ್ಳಲು ಈ ಚಿತ್ರ ವೀಕ್ಷಿಸಬೇಕು ಎಂದರು.
ಪ್ರಭುದೇವ ಜೊತೆ ಸಿನಿಮಾ ಮಾಡುವ ಕನಸು ನನಸಾಗಿದೆ: ಶಿವ ರಾಜ್ಕುಮಾರ್ ಮಾತನಾಡಿ, ರಾಕ್‌ಲೈನ್ ಪ್ರೊಡಕ್ಷನ್ ಸಂಸ್ಥೆ ನಮ್ಮ ಮನೆ ಇದ್ದ ಹಾಗೆ. ಈ ಬ್ಯಾನರ್ನಲ್ಲಿ ಹೆಚ್ಚು ಸಿನಿಮಾ ಮಾಡಿರುವ ನಟ ಅಂದ್ರೆ ನಾನೇ ಅನಿಸುತ್ತದೆ. ಪ್ರಭುದೇವ ಜೊತೆ ಸಿನಿಮಾ ಮಾಡಬೇಕೆಂಬ ಕನಸಿತ್ತು. ಆ ಕನಸೀಗ ನನಸಾಗಿದೆ ಎಂದು ತಿಳಿಸಿದರು.