ಕರ್ನಾಟಕ

karnataka

ETV Bharat / entertainment

ಬಾಲಿವುಡ್​​ ಸಿನಿಮಾ ನಿರ್ದೇಶಿಸಲಿದ್ದಾರೆ ಶಿವಣ್ಣನ 'ಭಜರಂಗಿ' ನಿರ್ದೇಶಕ: ಟೈಗರ್​ ಶ್ರಾಫ್​​ 'ಬಾಘಿ 4'ಗೆ ಹರ್ಷ ಆ್ಯಕ್ಷನ್​ ಕಟ್ - BAAGHI 4 FIRST LOOK

ಬಾಲಿವುಡ್​​ ಸೂಪರ್​ ಸ್ಟಾರ್​ ಟೈಗರ್​ ಶ್ರಾಫ್ ಮುಖ್ಯಭೂಮಿಕೆಯ 'ಬಾಘಿ 4' ಸಿನಿಮಾಗೆ ಕನ್ನಡದ ಎ.ಹರ್ಷ ಆ್ಯಕ್ಷನ್​ ಕಟ್​​ ಹೇಳುತ್ತಿದ್ದಾರೆ. ಸಿನಿಮಾ ಬರುವ ವರ್ಷ ತೆರೆಕಾಣಲಿದೆ.

A Harsha Bollywood movie Baaghi 4
ಟೈಗರ್​ ಶ್ರಾಫ್​​ 'ಬಾಘಿ 4'ಗೆ ಹರ್ಷ ಆ್ಯಕ್ಷನ್​ ಕಟ್ (Film Poster)

By ETV Bharat Entertainment Team

Published : Nov 18, 2024, 1:16 PM IST

Updated : Nov 18, 2024, 2:03 PM IST

ಭಜರಂಗಿ, ಅಂಜನಿಪುತ್ರ, ಭೀಮ, ವೇದ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಎ.ಹರ್ಷ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ. ಕನ್ನಡದಲ್ಲಿ ಸುಮಾರು 10 ಸಿನಿಮಾಗಳನ್ನು ನಿರ್ದೇಶಿಸಿರುವ ಇವರು ಸದ್ಯ ಬಾಲಿವುಡ್​ ಪ್ರವೇಶಿಸಿದ್ದಾರೆ. ನಟ ಶಿವರಾಜ್​​​ಕುಮಾರ್ ಅವರ ಹೆಚ್ಚು ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿರುವ ಹರ್ಷ ಅವರೀಗ ಬಾಲಿವುಡ್​​ ಸೂಪರ್​ ಸ್ಟಾರ್​ ಟೈಗರ್​ ಶ್ರಾಫ್​ ಅವರ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದ್ದಾರೆ.

ಬಾಲಿವುಡ್​ನ ಬಹುಬೇಡಿಕೆ ನಟ ಟೈಗರ್ ಶ್ರಾಫ್ ಅವರು ತಮ್ಮ ಸೂಪರ್‌ ಹಿಟ್ 'ಬಾಘಿ' ಫ್ರ್ಯಾಂಚೈಸ್‌ನ ನಾಲ್ಕನೇ ಭಾಗವನ್ನಿಂದು ಅಧಿಕೃತವಾಗಿ ಘೋಷಿಸಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕವನ್ನೂ ಅನೌನ್ಸ್ ಮಾಡಲಾಗಿದೆ. ಕನ್ನಡದ ಜನಪ್ರಿಯ ನಿರ್ದೇಶಕ ಎ.ಹರ್ಷ ನಿರ್ದೇಶನದ ಬಾಘಿ 4 ಆ್ಯಕ್ಷನ್-ಥ್ರಿಲ್ಲರ್​​ನ ಹೊಸ ಸ್ವರೂಪವನ್ನು ಒದಗಿಸುವ ಭರವಸೆ ನೀಡಿದೆ. ಇಂದು ರಿಲೀಸ್​ ಆಗಿರುವ ಪೋಸ್ಟರ್​ ಕೂಡಾ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶ ಕಂಡಿದೆ. ಚಿತ್ರತಂಡ ಸಂಪೂರ್ಣ ಬಾಲಿವುಡ್​​​ನವರಾಗಿದ್ದು, ಕನ್ನಡದ ಜನಪ್ರಿಯ ನಿರ್ದೇಶಕ ಎ.ಹರ್ಷ ನಿರ್ದೇಶಿಸುತ್ತಿದ್ದಾರೆ.

ನಿರ್ದೇಶಕ ಎ.ಹರ್ಷ ಇಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ. ಗಾಢ ಮತ್ತು ರಕ್ತಸಿಕ್ತ ನೋಟದಲ್ಲಿ ನಾಯಕ ನಟ ಟೈಗರ್​ ಶ್ರಾಫ್​​ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಟಾಯ್ಲೆಟ್ ಸೀಟ್ ಮೇಲೆ ಕುಳಿತು, ಚಾಕು ಮತ್ತು ಮದ್ಯದ ಬಾಟಲಿಯನ್ನಿಡಿದಿದ್ದಾರೆ. ಸುತ್ತಲಿನ ಗೋಡೆ ಮತ್ತು ನೆಲ ಕೂಡಾ ರಕ್ತಸಿಕ್ತವಾಗಿದೆ. ನೆಲದ ಮೇಲೆ ಮೃತ ದೇಹಗಳನ್ನು ಕಾಣಬಹುದು. ಕ್ರೂರ ನೋಟದಲ್ಲಿ ಟೈಗರ್​ ಕಾಣಿಸಿಕೊಂಡಿದ್ದು, ದಿಸ್​ ಟೈಮ್​ ಹಿ ಈಸ್​ ನಾಟ್​ ದಿ ಸೇಮ್​ ಎಂದು ಸಹ ಬರೆಯಲಾಗಿದೆ. ಹಾಗಾಗಿಮ ಈ ಬಾರಿ ಅವರ ಪಾತ್ರ ಹೇಗಿರಬಹುದು ಎಂಬ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.

ಇದನ್ನೂ ಓದಿ:'ಮಂಜು ನಂಬಿಕೆಗೆ ಅರ್ಹರಲ್ಲ, ಗೌತಮಿ ಫೇಕ್'​: ವೈಲ್ಡ್​​ಕಾರ್ಡ್​ ಸ್ಪರ್ಧಿಗಳಿಂದ ನೇರನುಡಿ; ಅನುಷಾ ಎಲಿಮಿನೇಟ್​​​

ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ 'ಬಾಘಿ' ಪ್ರ್ಯಾಂಚೈಸ್​​ 2016ರ ತೆಲುಗು ಸಿನಿಮಾ 'ವರ್ಷಮ್‌'ನ ಭಾಗಶಃ ರೀಮೇಕ್ ಆಗಿ ಮತ್ತು 'ದಿ ರೈಡ್: ರಿಡೆಂಪ್ಶನ್‌'ನಿಂದ ಪ್ರೇರಿತವಾದ ಆ್ಯಕ್ಷನ್-ಪ್ಯಾಕ್ಡ್ ಕ್ಲೈಮ್ಯಾಕ್ಸ್‌ನೊಂದಿಗೆ ಪ್ರಾರಂಭವಾಯಿತು. ಸಬ್ಬೀರ್ ಖಾನ್ ನಿರ್ದೇಶನದ ಮೊದಲ ಭಾಗದಲ್ಲಿ ಟೈಗರ್ ಶ್ರಾಫ್​​ ಜೊತೆಗೆ ಶ್ರದ್ಧಾ ಕಪೂರ್ ಮತ್ತು ಸುಧೀರ್ ಬಾಬು ಕಾಣಿಸಿಕೊಂಡಿದ್ದರು. ಅಹ್ಮದ್ ಖಾನ್ ನಿರ್ದೇಶನದಲ್ಲಿ ಬಂದ ಮುಂದಿನ ಭಾಗಗಳಲ್ಲಿ ಟೈಗರ್​ ಜೊತೆ ದಿಶಾ ಪಟಾನಿ (ಬಾಘಿ 2) ಮತ್ತು ರಿತೇಶ್ ದೇಶ್‌ಮುಖ್ (ಬಾಘಿ 3) ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ಅಧಿಕಾರ ಬೇಡ, ಆದರೆ ರಾಜಕೀಯಕ್ಕೆ ಸಿದ್ಧತೆ ನಡೆಯುತ್ತಿದೆ': ಬೆದರಿಕೆಗಳು ಬಂದಿವೆ ಎಂದ ನಟ ಚೇತನ್ ಅಹಿಂಸಾ

2014ರಲ್ಲಿ ಹೀರೋಪಂತಿ ಸಿನಿಮಾ ಮೂಲಕ ಬಾಲಿವುಡ್​ ಪ್ರವೇಶಿಸಿದ ಹೆಸರಾಂತ ನಟ ಜಾಕಿ ಶ್ರಾಫ್​ ಪುತ್ರ ಟೈಗರ್ ಶ್ರಾಫ್​​ ಅವರು 'ಬಾಘಿ' ಪ್ರ್ಯಾಂಚೈಸ್, ವಾರ್​, ಗಣ್​​​​ಪತ್ ಮತ್ತು ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರಗಳ ಮೂಲಕ ಆ್ಯಕ್ಷನ್ ಸ್ಟಾರ್ ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದೀಗ ಕನ್ನಡ ನಿರ್ದೇಶಕ ಹರ್ಷ ಅವರ ನಿರ್ದೇಶನದಲ್ಲಿ 'ಬಾಘಿ'ಯ ನಾಲ್ಕನೇ ಭಾಗ ಮೂಡಿಬರುತ್ತಿದ್ದು, ಅದ್ಭುತ ಆ್ಯಕ್ಷನ್​​ ಸಿನಿಮೀಯ ಅನುಭವವನ್ನು ಸಿನಿಪ್ರಿಯರು ನಿರೀಕ್ಷಿಸಿದ್ದಾರೆ.

Last Updated : Nov 18, 2024, 2:03 PM IST

ABOUT THE AUTHOR

...view details