ನಾಗ್ ಅಶ್ವಿನ್ ನಿರ್ದೇಶನದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಚಿತ್ರ ಕಳೆದ ದಿನ (ಗುರುವಾರ, ಜೂನ್ 27) ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿ ಧೂಳೆಬ್ಬಿಸಿದೆ. ಬಹುತೇಕ ಮೆಚ್ಚುಗೆ ಸ್ವೀಕರಿಸಿದ ಈ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. ಭಾರತದಲ್ಲೇ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶ ಕಂಡ ಚಿತ್ರತಂಡವೀಗ ಯಶಸ್ಸಿನಲೆಯಲ್ಲಿ ತೇಲುತ್ತಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಇಂಡಿಯನ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಬಹುತಾರಾಗಣದ ಬಿಗ್ ಪ್ರಾಜೆಕ್ಟ್ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಆಗಿ ದಾಖಲೆ ಬರೆದಿದೆ.
ಸೂಪರ್ ಹಿಟ್ ಸಿನಿಮಾಗಳ ದಾಖಲೆ ಬ್ರೇಕ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿರುವ ಕಲ್ಕಿ 2898 ಎಡಿ ಚಿತ್ರ ತೆರೆಕಂಡ ಮೊದಲ ದಿನ ಭಾರತದಲ್ಲಿ ಎಲ್ಲಾ ಭಾಷೆ ಸೇರಿ ಸರಿ ಸುಮಾರು 118 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೈಥೋ ಸೈನ್ಸ್ ಫಿಕ್ಷನ್ ಪ್ರಪಂಚದಾದ್ಯಂತ ಬರೋಬ್ಬರಿ 180 ಕೋಟಿ ರೂ. ಸಂಗ್ರಹಿಸಿದೆ. ಪ್ರಭಾಸ್ ಮುಖ್ಯಭೂಮಿಕೆಯ ಈ ಚಿತ್ರ ತನ್ನ ಮೊದಲ ದಿನದ ಅಂಕಿ ಅಂಶಗಳೊಂದಿಗೆ ಕೆಜಿಎಫ್ 2 (159 ಕೋಟಿ ರೂ.), ಸಲಾರ್ (158 ಕೋಟಿ ರೂ.), ಲಿಯೋ (142.75 ಕೋಟಿ ರೂ.), ಸಾಹೋ (130 ಕೋಟಿ ರೂ.) ಮತ್ತು ಜವಾನ್ (129 ಕೋಟಿ ರೂ.) ಎಂಬ ಸೂಪರ್ ಹಿಟ್ ಚಿತ್ರಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಪುಡಿಗಟ್ಟಿದೆ.
ಅತಿ ಹೆಚ್ಚು ಕಲೆಕ್ಷನ್ ಮಾಡಿದ 3ನೇ ಚಿತ್ರವಿದು:ಅದಾಗ್ಯೂ, 2022ರ ಬ್ಲಾಕ್ಬಸ್ಟರ್ ಸಿನಿಮಾ 'ಆರ್ಆರ್ಆರ್'ಭಾರತೀಯ ಚಿತ್ರರಂಗದಲ್ಲೇ ತೆರೆಕಂಡ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ವಿಶ್ವ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿದ ಈ ಚಿತ್ರ ತನ್ನ ಮೊದಲ ದಿನ 223 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 'ಆರ್ಆರ್ಆರ್' ನಂತರದ ಸ್ಥಾನವನ್ನು ಪ್ರಬಾಸ್ ಅವರದ್ದೇ ಆದ ಬಾಹುಬಲಿ 2 ಹೊಂದಿದೆ. ಈ ಸೂಪರ್ ಹಿಟ್ ಸಿನಿಮಾ ಬಿಡುಗಡೆ ಆದ ದಿನ 217 ಕೋಟಿ ರೂ. ಕಲೆಕ್ಷನ್ ಮಾಡಿತ್ತು.