ಹೈದರಾಬಾದ್: ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾ ಬಿಡುಗಡೆ ನಿಗದಿತ ದಿನಾಂಕಕ್ಕಿಂತ ವಿಳಂಬವಾಗುವುದು ಸಾಮಾನ್ಯ. ಇದರಿಂದ ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರವೂ ವ್ಯಕ್ತವಾಗಿ, ಕಾಯುವಿಕೆ ಅವಧಿ ದೀರ್ಘ ಆಗುತ್ತದೆ. ಆದರೆ, ಈ ಮಾತು ದೇವರ ಸಿನಿಮಾದಲ್ಲಿ ವಿರುದ್ಧವಾಗಿದೆ. ಜೂ ಎನ್ಟಿಆರ್ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ದೇವರ -ಭಾಗ 1' ಸಿನಿಮಾ ಇದೀಗ ನಿಗದಿತ ದಿನಾಂಕಕ್ಕೂ ಮುನ್ನವೇ ಬಿಡುಗಡೆಗೆ ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ.
ಆರಂಭದಲ್ಲಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತಾದರೂ ಬಳಿಕ ಅಕ್ಟೋಬರ್ 10ರಂದು 'ದೇವರ' ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಇದೀಗ ಚಿತ್ರ ಈ ನಿಗದಿತ ದಿನಾಂಕಕ್ಕೆ ಮೊದಲೇ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದು, ಸೆಪ್ಟೆಂಬರ್ 27ಕ್ಕೆ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ. ಅವಧಿಗೆ ಮುನ್ನ ಚಿತ್ರ ಬಿಡುಗಡೆಯಾಗಲು ಕಾರಣ ಪವನ್ ಕಲ್ಯಾಣ್ 'ಒಜಿ' ಸಿನಿಮಾ ಕೂಡ ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ.
ಇಬ್ಬರು ಸ್ಟಾರ್ ನಟರ ಸಿನಿಮಾಗಳ ನಡುವಿನ ಸ್ಪರ್ಧೆ ತಪ್ಪಿಸುವ ಉದ್ದೇಶದಿಂದ ದೇವರ ಸಿನಿಮಾ ಶೀಘ್ರ ಬಿಡುಗಡೆಗೆ ತಂಡ ನಿರ್ಧರಿಸಿದೆ. ಇದಕ್ಕಾಗಿ ಚಿತ್ರ ಕೆಲಸಗಳಿಗೆ ವೇಗ ಕೂಡ ನೀಡಲಾಗಿತ್ತು. ತಂಡ ಇತ್ತೀಚೆಗಷ್ಟೇ ಗೋವಾದಲ್ಲಿ ಶೂಟಿಂಗ್ ಮುಗಿಸಿ ಮರಳಿದೆ.