ಹೈದರಾಬಾದ್: ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಜೂನಿಯರ್ ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1'ರ ಟ್ರೇಲರ್ ಇಂದು ಅನಾವರಣಗೊಂಡಿದೆ. ಚಿತ್ರ ತಯಾರಕರು ಅಂತಿಮವಾಗಿ ಇಂದು (ಸೆಪ್ಟೆಂಬರ್ 10) ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡೋ ಮೂಲಕ ಸಿನಿಪ್ರಿಯರ ಕುತೂಹಲ, ಉತ್ಸಾಹ ದ್ವಿಗುಣಗೊಳಿಸಿದ್ದಾರೆ.
ಚಿತ್ರದ ಟ್ರೇಲರ್ಗೂ ಮುನ್ನ ಹಲವು ಪೋಸ್ಟರ್‌ಗಳು ಮತ್ತು ಹಾಡುಗಳನ್ನು ರಿಲೀಸ್ ಮಾಡಲಾಗಿತ್ತು. ಈ ಮೂಲಕ ಚಿತ್ರ ತಂಡ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟಿಸಿತ್ತು. ಇದೀಗ ಟ್ರೇಲರ್ ಹೊರಬಿದ್ದಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಟ್ರೇಲರ್ ತನ್ನ ಭೂಮಿ ಮತ್ತು ಜನರ ರಕ್ಷಕನಾಗಿ ನಿಂತಿರುವ ಜೂನಿಯರ್ ಎನ್‌ಟಿಆರ್ ಪಾತ್ರದ ಒಂದು ನೋಟ ಒದಗಿಸಿದೆ. ಹೈ - ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಜೂನಿಯರ್ ಎನ್‌ಟಿಆರ್ ಹೋರಾಟದ ಮನೋಭಾವ ವ್ಯಕ್ತಗೊಂಡಿದೆ. ಬೆದರಿಕೆಗಳಿಂದ ತಮ್ಮ ಸಮುದಾಯವನ್ನು ರಕ್ಷಿಸಲು ಹೋರಾಡುತ್ತಾರೆ. ಜಾಹ್ನವಿ ಅವರ ಪಾತ್ರ ಚಿತ್ರಕ್ಕೆ ರೊಮ್ಯಾಂಟಿಕ್ ಅಂಶ ಸೇರಿಸಲಿದೆ. ನ್ಯಾಯ, ನಿಷ್ಠೆ ಮತ್ತು ಪ್ರತೀಕಾರದಂದಹ ಅಂಶಗಳನ್ನೊಳಗೊಂಡಿರುವ ಈ ಡ್ರಾಮಾದಲ್ಲಿ ಜೂನಿಯರ್ ಎನ್‌ಟಿಆರ್ ಎದುರಾಳಿಯಾಗಿ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಸೇಡು ತೀರಿಸಿಕೊಳ್ಳಲಿಚ್ಛಿಸುವ ಆತ ಅಧಿಕಾರ ಬಯಸುತ್ತಾ ಉದ್ವಿಗ್ನತೆ ಸೃಷ್ಟಿಸುತ್ತಾನೆ.
'ದೇವರ: ಭಾಗ 1' ಬಿಡುಗಡೆಗೂ ಮುನ್ನ ಅಮೆರಿಕದಲ್ಲಿ 26,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ. ಜಾಗತಿಕ ಮಟ್ಟದ ಅಭಿಮಾನಿಗಳ ಈ ಸ್ಪಂದನೆ ಸಿನಿಮಾ ಸುತ್ತಲಿರುವ ಉತ್ಸಾಹವನ್ನು ಒತ್ತಿಹೇಳುತ್ತಿದೆ. ಜೊತೆಗೆ ಜೂನಿಯರ್ ಎನ್‌ಟಿಆರ್ ಅವರ ಜಾಗತಿಕ ಮಟ್ಟದ ಜನಪ್ರಿಯತೆಯನ್ನೂ ಸಾಬೀತುಪಡಿಸಿದೆ.