'ಹೊಂದಿಸಿ ಬರೆಯಿರಿ' ಹಾಗೂ ಇತ್ತೀಚೆಗೆ 'O2' ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ಪ್ರವೀಣ್ ತೇಜ್ 'ಜಿಗರ್' ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನಮನ ಗೆದ್ದಿರುವ 'ಜಿಗರ್' ಈ ವಾರ ಪ್ರೇಕ್ಷಕರೆದುರು ಬರಲಿದೆ.
ಪ್ರವೀಣ್ ತೇಜ್ ಅವರಿಗೆ ನಾಯಕಿಯಾಗಿ ವಿಜಯಶ್ರೀ ನಟಿಸಿದ್ದಾರೆ. ವಿನಯಪ್ರಸಾದ್, ಯಶ್ವಂತ್ ಶೆಟ್ಟಿ, ಬಲರಾಜ್ವಾಡಿ, ಭವ್ಯ ಪೂಜಾರಿ ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿದ್ದಾರೆ. ಶಿವಸೇನ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಜ್ಞಾನೇಶ್ ಮಠದ್ ಅವರು ಸಂಕಲನದ ಜವಾಬ್ದಾರಿ ಪೂರ್ಣಗೊಳಿಸಿದ್ದಾರೆ. ಧನಂಜಯ ಬಿ ನೃತ್ಯ ನಿರ್ದೇಶನ ಹಾಗೂ ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನವಿರುವ ಈ "ಜಿಗರ್" ಚಿತ್ರಕ್ಕೆ ಸುನೀಲ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಹಾಗೂ ಗಣೇಶ್ ಪರಶುರಾಮ್ ಹಾಡುಗಳನ್ನು ರಚಿಸಿದ್ದಾರೆ.
ಯು.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಇದೇ ಜುಲೈ 5, ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.