'ಬಾನದಾರಿಯಲ್ಲಿ' ಚಿತ್ರದ ಬಳಿಕ ನಟ ಗಣೇಶ್ ಅಭಿನಯಿಸುತ್ತಿರುವ ಚಿತ್ರವೇ 'ಕೃಷ್ಣಂ ಪ್ರಣಯ ಸಖಿ'. ಪೋಸ್ಟರ್ ಹಾಗು ಶೀರ್ಷಿಕೆಯಿಂದ ಸದ್ದು ಮಾಡುತ್ತಿರುವ ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಇದೀಗ ಮೊದಲ ಹಾಡು ರಿಲೀಸ್ ಆಗಿದೆ.
ನಿಶಾನ್ ರಾಯ್ ಬರೆದು ಚಂದನ್ ಶೆಟ್ಟಿ ಹಾಡಿರುವ 'ಮೈ ಮ್ಯಾರೇಜ್ ಇಸ್ ಫಿಕ್ಸ್ಡ್' ಎಂಬ ಗೀತೆ ಇತ್ತೀಚೆಗೆ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಬಿಡುಗಡೆಯಾಯಿತು. ಸಾವಿರಾರು ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡು ಸಿನಿಮಾ ಪ್ರೇಮಿಗಳನ್ನು ಇಂಪ್ರೆಸ್ ಮಾಡುತ್ತಿದೆ.
ಈ ಕುರಿತು ನಟ ಗಣೇಶ್ ಮಾತನಾಡಿ, ''ಶ್ರೀನಿವಾಸರಾಜು ಅವರು ಫೋನ್ ಮಾಡಿ ಕಥೆ ಹೇಳಬೇಕೆಂದಾಗ ನನಗೆ ಆಶ್ಚರ್ಯವಾಯಿತು. ಅವರು ದಂಡುಪಾಳ್ಯದಂತಹ ಥ್ರಿಲ್ಲರ್ ಚಿತ್ರ ಮಾಡಿರುವ ನಿರ್ದೇಶಕರು. ನಾನು ನೋಡಿದರೆ ಪ್ರೇಮ ಕಥೆಗಳ ಹೀರೋ. ನನಗೆ ಇವರು ಯಾವ ತರಹ ಕಥೆ ಮಾಡಿರಬಹುದು ಅಂದುಕೊಂಡು ಕಥೆ ಕೇಳಿದೆ. ಅವರು ಕಥೆ ಶುರು ಮಾಡುತ್ತಾ, ನೀವು ಮದುವೆ ಗಂಡಿನ ತರಹ ಬರುತ್ತೀರಾ. ಎಂಟು ಜನ ನಾಯಕಿಯರು ಮದುವೆ ಹೆಣ್ಣಿನ ತರಹ ಸಿದ್ಧವಾಗಿರುತ್ತಾರೆ ಎಂದರು. ಆಗ ಇದು ನನ್ನ ಜಾನರ್ನ ಚಿತ್ರ ಅಂದುಕೊಂಡೆ. ಆದರೆ, ಚಿತ್ರದಲ್ಲಿ ಬರೀ ಇಷ್ಟೇ ಇಲ್ಲ. ಒಳ್ಳೆಯ ಟ್ವಿಸ್ಟ್ ಇಟ್ಟಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿದೆ'' ಎಂದು ತಿಳಿಸಿದರು.
ನಿರ್ದೇಶಕ ಶ್ರೀನಿವಾಸ್ ರಾಜು ಮಾತನಾಡಿ, ''ಇದು ಗಣೇಶ್ ಅವರಿಗಾಗಿಯೇ ಮಾಡಿರುವ ಕಥೆ. ಫ್ಯಾಮಿಲಿ ಎಂಟರ್ಟೈನರ್. ಎಲ್ಲಾ ಜನರೇಶನ್ನಿನವರಿಗೂ ಹಿಡಿಸುವ ಕಥೆಯೂ ಹೌದು. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿವೆ. ಕನ್ನಡ ಚಿತ್ರರಂಗದ ಹಿರಿ ಕಿರಿ ಕಲಾವಿದರು ಸೇರಿದಂತೆ 64 ಜನ ಕಲಾವಿದರು ಅಭಿನಯಿಸಿದ್ದಾರೆ'' ಎಂದರು.