ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್ ನಮ್ಮೆಲ್ಲರನ್ನು ಅಗಲಿ ನಾಳೆಗೆ(ಅ.29) ಮೂರು ವರ್ಷ ಪೂರ್ಣಗೊಳ್ಳಲಿದೆ. ಆದ್ರೆ ಅವರ ನೆನಪು ಮಾತ್ರ ಸದಾ ಜೀವಂತ. ಅಪ್ಪು ಅವರ ನಿಧನದ ನಂತರ ಬಂದ ಗಂಧದಗುಡಿ ಚಿತ್ರ ತೆರೆಗಪ್ಪಳಿಸಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ. ಪುನೀತ್ ರಾಜ್ಕುಮಾರ್ ಅವರ ಮೊದಲನೇ ಪುಣ್ಯಸ್ಮರಣೆ ಸಂದರ್ಭ ಈ ಚಿತ್ರ ಬಿಡುಗಡೆ ಆಗಿ ಡೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
'ಗಂಧದಗುಡಿ' ರಾಷ್ಟ್ರಪ್ರಶಸ್ತಿ ವಿಜೇತ ನಟನ ಕನಸಿನ ಕೂಸು. ಅವರು ಕಂಡ ಕನಸು ವಿಶೇಷ. ನಮ್ಮ ಕರುನಾಡಿನ ಸಂಪದ್ಭರಿತ ಪಾಕೃತಿಕ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯ ಮಾಡಿಸಬೇಕು ಅನ್ನೋದು ಅಪ್ಪು ಅವರ ಗುರಿಯಾಗಿತ್ತು. ಕರ್ನಾಟಕದ ಹತ್ತು ಹಲವು ಅರಣ್ಯ ಪ್ರದೇಶ, ವಿಶೇಷ ಸ್ಥಳಗಳು, ನದಿಯೊಳಗಿನ ಸೌಂದರ್ಯ.. ಹೀಗೆ ಪಾಕೃತಿಕ ಶೀಮಂತಿಕಗೆ ಸಿನಿಮಾ ರೂಪ ಕೊಡಬೇಕು ಮತ್ತು ಅದನ್ನು ಜನರಿಗೆ ತಲುಪಿಸಬೇಕೆನ್ನುವ ಗುರಿಯನ್ನು ಅವರು ಹೊಂದಿದ್ದರು. ಅದು 'ಗಂಧದಗುಡಿ' ಮೂಲಕ ಸಾಕಾರಗೊಂಡಿತು. ಆದ್ರೆ ಸಿನಿಮಾ ಚಿತ್ರಮಂದಿರ ಪ್ರವೇಶಿಸುವ ವೇಳೆ 'ಗಂಧದಗುಡಿ'ಯ ಸಾರಥಿಯೇ ಇಲ್ಲದಿದ್ದದ್ದು ಮಾತ್ರ ನೋವಿನ ಸಂಗತಿ.
ಪುನೀತ್ ಅಶ್ವಿನಿ ದಂಪತಿಯ ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ 'ಗಂಧದಗುಡಿ' 2022ರ ಅಕ್ಟೋಬರ್ 28ರಂದು ತೆರೆಗಪ್ಪಳಿಸಿತು. ಅಮೋಘವರ್ಷ ಜೆ.ಎಸ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಿ ಅಜನೀಶ್ ಲೋಕನಾಥ್ ಅವರ ಸಂಗೀತವಿತ್ತು. ಸಿನಿಮಾ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿತ್ತು.