ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿಯಾಗಿದೆ. ಮಾಸ್ ಎಂಟರ್ಟೈನ್ಮೆಂಟ್ ಜೊತೆ ಸಾಮಾಜಿಕ ಸಂದೇಶವುಳ್ಳ ಕಥೆ ಆಧರಿಸಿ ಬಂದ 'ಭೀಮ' ಚಿತ್ರ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಇದರ ಬೆನ್ನಲ್ಲೇ ವಿಜಯ್ ಮುಖ್ಯಭೂಮಿಕೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಇತ್ತೀಚೆಗಷ್ಟೇ ಭೀಮ ಚಿತ್ರದ ಸಕ್ಸಸ್ ಮೀಟ್ನಲ್ಲಿ ನಾಯಕ ನಟ ವಿಜಯ್ಗೆ ಮುಂದಿನ ಸಿನಿಮಾ ಯಾವುದೆಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ್ದ ನಟ, ಭೀಮ ಚಿತ್ರದ ಕೊನೆಯಲ್ಲಿ ಸಲಗ 2 ಚಿತ್ರಕ್ಕೆ ಲೀಡ್ ಕೊಡಲಾಗಿದೆ. ಭೀಮ ಚಿತ್ರದ ಸಿಕ್ವೇಲ್ ಮಾಡುವ ಯೋಚನೆಯೂ ಇದೆ. ಯಾವುದೆಂದು ಇನ್ನೂ ಡಿಸೈಡ್ ಮಾಡಿಲ್ಲ. ಸಲಗ ಸಿನಿಮಾ ಹಿಟ್ ಆದಾಗ ಸಿಕ್ವೇಲ್ ಮಾಡೋಣವೆಂದು ಒಂದು ಮಟ್ಟದ ಸ್ಕ್ರಿಪ್ಟ್ ಕೂಡಾ ಮಾಡಿದ್ದೇವೆ ಎಂದು ತಿಳಿಸಿದ್ದರು.
ಸಲಗ ಹಾಗೂ ಭೀಮ ಸಿನಿಮಾದಲ್ಲಿ ಸಹಾಯ ನಿರ್ದೇಶಕನಾಗಿ ತಂಬಿ ನನ್ನ ಜೊತೆ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ವೀರ, ಮೌರ್ಯ ಕೂಡ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮೊದಲು ತಂಬಿ ನಿರ್ದೇಶನದಲ್ಲಿ ಒಂದು ಚಿತ್ರ ಮಾಡುತ್ತೇನೆ. ನಂತರ ವೀರನೊಂದಿಗೆ ಸಿನಿಮಾ ಮಾಡುತ್ತೇನೆ. ಮೌರ್ಯನಿಗೂ ಈಗಾಗಲೇ ಬರೆಯಲು ಹೇಳಿದ್ದೇನೆ ಎಂದಿದ್ದರು.
ಈ ಮಾತಿನಂತೆ ದುನಿಯಾ ವಿಜಯ್ ತಮ್ಮ ಹೊಸ ಸಿನಿಮಾವನ್ನು ಇಂದು ಘೋಷಿಸಿದ್ದಾರೆ. 'ವಿಕೆ 30' ಎಂಬ ತಾತ್ಕಾಲಿಕ ಶೀರ್ಷಿಕೆಯ ಸಿನಿಮಾ ಸೋಮವಾರ ಘೋಷಣೆಯಾಗಿದೆ. ವೆಟ್ರಿವೇಲ್ ಅಂದ್ರೆ ತಂಬಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ತಂಬಿ ನಿರ್ದೇಶಕರು ಎಂಬುದು ಬಿಟ್ಟರೆ ಇನ್ಯಾವ ವಿಚಾರವೂ ಬಹಿರಂಗಗೊಂಡಿಲ್ಲ. ನಿರ್ಮಾಪಕರು, ಸಹ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಚಿತ್ರದ ಹೆಚ್ಚಿನ ಮಾಹಿತಿ ಇನ್ನಷ್ಟೇ ಘೋಷಣೆಯಾಗಬೇಕಿದೆ. ಸದ್ಯಕ್ಕೆ ಬರವಣಿಗೆ ಕೆಲಸ ಶುರುವಾಗಿದೆ.