'ಆ ದಿನಗಳು', 'ಮೈನಾ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಹೊಂದಿರುವ ನಟ ಚೇತನ್ ಅಹಿಂಸಾ. ಕೆಲ ವರ್ಷಗಳಿಂದ ಸಾಮಾಜಿಕ ಹೋರಾಟಗಾರನಾಗಿ ಗುರತಿಸಿಕೊಂಡಿರುವ ಚೇತನ್ ಚಿತ್ರರಂಗದ ವಾತಾವರಣ ಹಾಗೂ ನಟ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಚೇತನ್, ಒಬ್ಬ ನಟನಾಗಿ ಹಾಗೂ ಹೋರಾಟಗಾರನಾಗಿ ನಾನು ಒಂದು ಸಮಸ್ಯೆ ಬಗ್ಗೆ ಟ್ಟೀಟ್ ಮಾಡಿದ್ದಕ್ಕೆ ನನ್ನನ್ನೂ ಜೈಲಿಗೆ ಹಾಕಿದರು. ಆ ಜೈಲಿನ ಸ್ಥಿತಿಗತಿ ಬಗ್ಗೆ ಹೇಳೋದಂದ್ರೆ ಅದು ತುಂಬಾನೇ ಕೆಟ್ಟ ಅನುಭವ ಎಂದು ತಿಳಿಸಿದ್ದಾರೆ.
ದರ್ಶನ್ ಅಪರಾಧಿ ಅಲ್ಲ, ಆರೋಪವಿದೆ: ನಟ ದರ್ಶನ್ ವಿಚಾರವಾಗಿ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಚೇತನ್, ''ದರ್ಶನ್ ಅಪರಾಧಿ ಅಲ್ಲದಿದ್ರೂ ಅವರ ಮೇಲೆ ಗಂಭೀರ ಆರೋಪವಿದೆ. ಮೃತ ರೇಣುಕಾಸ್ವಾಮಿ ಅವರು ನಟಿ ಪವಿತ್ರಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ನಂಬುತ್ತೇವೆ. ನಮ್ಮಲ್ಲಿ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು. ಇನ್ನೂ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತ್ರ ಚಿತ್ರರಂಗ ಮಾತನಾಡೋದಲ್ಲ, ಇಂತಹ ಸಮಸ್ಯೆ ಎದುರಾದಾಗ ಅವರು ಮೌನ ವಹಿಸುತ್ತಾರೆ'' ಎಂದು ತಿಳಿಸಿದ್ದಾರೆ.
ದರ್ಶನ್ ಜೊತೆ ಅಷ್ಟೊಂದು ಒಡನಾಟವಿಲ್ಲ:ಸದ್ಯ ಈಗಲಾದರೂ ಮಾತನಾಡುತ್ತಿದ್ದಾರೆ. ಇದೊಂದು ಒಳ್ಳೆ ಬೆಳವಣಿಗೆ. ರೇಣುಕಾಸ್ವಾಮಿ ಮಾಡಿದ್ದು ತಪ್ಪೇ, ಆದ್ರೆ ಅದಕ್ಕೆ ಕೊಲೆಯೊಂದೇ ಪರಿಹಾರ ಅಲ್ಲ. ನನಗೆ ದರ್ಶನ್ ಅವರ ಜೊತೆ ಅಷ್ಟೊಂದು ಒಡನಾಟವಿಲ್ಲ. 2009ರ ಅಮೃತ ಮಹೋತ್ಸವ, ಬಿರುಗಾಳಿ ರಿಲೀಸ್ ಆದ ಬಳಿಕ ಮೊದಲ ಬಾರಿಗೆ ದರ್ಶನ್ ಜೊತೆ ಮಾತುಕತೆ ಆಗಿತ್ತು. ನಂತರ ಡಬ್ಬಿಂಗ್ ಸ್ಟುಡಿಯೋ ಒಂದರಲ್ಲಿ ಮಾತನಾಡಿದ್ದೇವಷ್ಟೇ ಎಂದು ಚೇತನ್ ತಿಳಿಸಿದರು.
ಜೈಲುವಾಸದ ದಿನಗಳನ್ನು ನೆನಪಿಸಿಕೊಂಡ ನಟ: ಜೈಲುವಾಸದ ದಿನಗಳನ್ನು ನೆನಸಿಕೊಂಡರೆ ಭಯ ಆಗುತ್ತದೆ. ಸೆಲ್ನಲ್ಲಿ ಇರಬಹುದು, ಆದ್ರೆ ಬ್ಯಾರೆಕ್ಸ್ ನಲ್ಲಿ ಕಷ್ಟ. ಒಂದು ಟ್ವೀಟ್ ಮಾಡಿದ್ದಕ್ಕೆ, ಕ್ರಿಮಿನಲ್ಸ್ ಜೊತೆ ಬ್ಯಾರೆಕ್ಸ್ನಲ್ಲಿ ಹಾಕಿದ್ರು. ಜೈಲಿನ ಗಟ್ಟಿ ನೆಲ ಹಾಗೂ ಬಾತ್ ರೂಂ ನೆನಪಿಸಿಕೊಂಡ್ರೆ ಛೇ ಛೇ. ಅದು ಸಣ್ಣ ಬಾತ್ ರೂಂ, ಅಲ್ಲೇ ಕೈ ತೊಳೆಯಬೇಕು, ಅಲ್ಲೇ ಹಲ್ಲು ಉಜ್ಜಬೇಕು, ಅಲ್ಲೇ ಸ್ನಾನ, ಡಸ್ಟ್ ಬಿನ್ ಕೂಡ ಅಲ್ಲೇ ಇತ್ತು. ಎಲ್ಲಾ ಅಲ್ಲೇ ಆಗಿ ತಿಪ್ಪೆ ಗುಂಡಿಯಂತಿತ್ತು. ಬೆಡ್, ಟಿವಿ ಏನೂ ಕೊಟ್ಟಿಲ್ಲ. ಅಷ್ಟೇ ಅಲ್ಲ, ಕೈದಿಗಳೇ ಅಡುಗೆ ಮಾಡುತ್ತಾರೆ. ಜೈಲು ಊಟ ನನಗೆ ಬಹಳ ಇಷ್ಟ ಆಗಿತ್ತು. ಮುದ್ದೆ ಸ್ವಲ್ಪ ಗಟ್ಟಿ ಇರುತ್ತೆ, ಆದ್ರೂ ಪರವಾಗಿಲ್ಲ. ಜೈಲಿನಲ್ಲಿ ಶಿಸ್ತುಬದ್ಧ ಜೀವನ ಶೈಲಿ ಇರುತ್ತದೆ. ತೂಕ ಇಳಿಸಿಕೊಂಡಿದ್ದೆ ಎಂದು ಹೇಳಿದರು.