ಬೆಂಗಳೂರು:ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರ ಮೊದಲಿನಿಂದಲೂ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ನಿರ್ಮಾಪಕರಿಗೆ ಇಲ್ಲಿಯವರೆಗೆ ಸ್ವಂತ ಕಟ್ಟಡ ಇರಲಿಲ್ಲ. ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಯನ್ನು ನೆರವೇರಿಸಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ರಾತ್ರಿ 8 ಗಂಟೆಗೆ ಸಮಯ ಕೊಟ್ಟಿದ್ದರು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯೇ ದೆಹಲಿಯಿಂದ ಹೊರಟು ಉದ್ಘಾಟನೆ ತಪ್ಪಿಸಬಾರದೆಂದು ಆಗಮಿಸಿದ್ದೇನೆ ಎಂದರು.
1972 ರಿಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆ. ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಆರ್ಥಿಕ ಸಹಾಯವನ್ನು ಸಂಘ ಕೇಳಿಯೇ ಇಲ್ಲ. ಸರ್ಕಾರದಿಂದ ಆರ್ಥಿಕ ಸಹಾಯ ಮಾಡಿಯೇ ಮಾಡುತ್ತದೆ ಎಂದು ಹೇಳಿದರು.
ಒಟಿಟಿ ವೇದಿಕೆ, ಪರಿಶೀಲಿಸಿ ಕ್ರಮ:ಕನ್ನಡದಲ್ಲಿ ಸರ್ಕಾರದ ವತಿಯಿಂದ ಒಟಿಟಿ ವೇದಿಕೆ ಸೃಜಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ಇದನ್ನು ಪರಿಶೀಲಿಸಿದ ಕ್ರಮ ಕೈಗೊಳ್ಳಲಿದೆ. ಕನ್ನಡ ಚಿತ್ರಗಳಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದರು.