ಕರ್ನಾಟಕ

karnataka

ETV Bharat / entertainment

ಚಿತ್ರೀಕರಣ ಮುಗಿಸಿ ಬರ್ತಿದ್ದಾಗ ರಸ್ತೆಯಲ್ಲಿ ಖಳನಟನಂತೆ ಎದುರಾದ ಯಮ! ನಿಶ್ಚಿತಾರ್ಥದ ದಿನವೇ ಯುವನಟ ದುರ್ಮರಣ! - Actor Died In Accident - ACTOR DIED IN ACCIDENT

ಮರಣ ಯಾವಾಗ ಅನ್ನೋದು ಊಹೆಗೂ ನಿಲುಕದ್ದು. ಛತ್ತೀಸ್​ಗಢದಲ್ಲಿ ನಟನೊಬ್ಬ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ಛತ್ತೀಸ್​ಗಢದ ಚಿತ್ರನಟ ಸಾವು
ರಸ್ತೆ ಅಪಘಾತದಲ್ಲಿ ಛತ್ತೀಸ್​ಗಢದ ಚಿತ್ರನಟ ಸಾವು

By ETV Bharat Karnataka Team

Published : Apr 11, 2024, 6:36 PM IST

ಬಿಲಾಸ್‌ಪುರ(ಛತ್ತೀಸ್​​ಗಢ):ನಿಶ್ಚಿತಾರ್ಥಕ್ಕೆ (ಎಂಗೇಜ್​ಮೆಂಟ್​) ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದವು. ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಸಂಭ್ರಮದಲ್ಲಿ ಭಾಗಿಯಾಗಲು ಹೊರಟಿದ್ದ ಛತ್ತೀಸ್‌ಗಢದ ನಟರೊಬ್ಬರು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಛತ್ತೀಸ್​ಗಢ ಸಿನಿಮಾ ರಂಗದಲ್ಲಿ ಖಳನಾಯಕನಾಗಿ ಪಾತ್ರ ಪೋಷಿಸುತ್ತಿದ್ದ ಸೂರಜ್ ಮೆಹರ್ ಬುಧವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಹಠಾತ್​ ಸಾವಿಗೀಡಾಗಿದ್ದಾರೆ. ಸಂಭ್ರಮ ಮನೆಮಾಡಬೇಕಿದ್ದ ಕುಟುಂಬದಲ್ಲೀಗ ಸೂತಕ ಮಡುಗಟ್ಟಿದೆ.

ಶೂಟಿಂಗ್​ ಮುಗಿಸಿ ತೆರಳುತ್ತಿದ್ದಾಗ ಎರಗಿದ ಜವರಾಯ:40 ವರ್ಷದ ನಟ ಸೂರಜ್ ಮೆಹರ್​​ ಅವರು 'ಆಖ್ರಿ ಫೈಸ್ಲಾ' ಎಂಬ ಸಿನಿಮಾದ ಶೂಟಿಂಗ್​ ಮುಗಿಸಿಕೊಂಡು ನಡುರಾತ್ರಿ ಮನೆಗೆ ತೆರಳುತ್ತಿದ್ದರು. ಬಿಲಾಸ್‌ಪುರದ ಸೆಂದಾರಿ ಗ್ರಾಮದ ಬಳಿ ಹೋಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಪಿಕಪ್​ ವಾಹನ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ನಟ ಸೂರಜ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಚಾಲಕ ಸೇರಿ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬುಧವಾರ ಮುಂಜಾನೆ 5 ಗಂಟೆಗೆ ಸೂರಜ್ ಮೆಹರ್ ಕುಟುಂಬಕ್ಕೆ ರಸ್ತೆ ಅಪಘಾತದ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು, ಪೊಲೀಸರ ನೆರವಿನಿಂದ ಸೂರಜ್ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ನಿಶ್ಚಿತಾರ್ಥದ ದಿನವೇ ಸಾವು:ದುರಂತ ಎಂದರೆ ನಟನ ಸಾವು ಆತನ ನಿಶ್ಚಿತಾರ್ಥದ ದಿನವೇ ಆಗಿದೆ. ಬುಧವಾರ (ಏಪ್ರಿಲ್​ 10)ದಂದು ತನ್ನ ಕೈಹಿಡಿಯಬೇಕಿದ್ದವಳ ಜತೆಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ, ದುರಾದೃಷ್ಟವಶಾತ್​ ಮನೆ ಸೇರುವ ಮುನ್ನವೇ ಜವರಾಯನ ರೌದ್ರಾವತಾರಕ್ಕೆ ಬಲಿಯಾಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಮಾಡಿದ್ದ ಸೂರಜ್​ ಹಠಾತ್​ ಸಾವಿನಿಂದ ಛತ್ತೀಸ್‌ಗಢ ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.

ರಸ್ತೆ ಅಪಘಾತದಲ್ಲಿ ಸೂರಜ್ ನಿಧನಕ್ಕೆ ಛತ್ತೀಸ್‌ಗಢಿ ಮತ್ತು ಭೋಜ್‌ಪುರಿ ಹಾಸ್ಯನಟ ಪ್ರದೀಪ್ ಶರ್ಮಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾವಿಗೂ ಒಂದು ದಿನ ಮುನ್ನ ಸೂರಜ್ ಮೆಹರ್ ಅವರು ನನ್ನೊಂದಿಗೆ ಆಖ್ರಿ ಫೈಸ್ಲಾ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಏಪ್ರಿಲ್ 10 ರಂದು ಅವರ ನಿಶ್ಚಿತಾರ್ಥವಿತ್ತು. ದೃಶ್ಯವನ್ನು ಪೂರ್ಣಗೊಳಿಸಿ ಅವರನ್ನು ಸೆಟ್​ನಿಂದ ಬೀಳ್ಕೊಟ್ಟಿದ್ದೆವು. ಊಹಿಸಲೂ ಆಗದ ದುರಂತ ನಡೆದಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಾನವ ಕಳ್ಳಸಾಗಣೆ ಆರೋಪ: 47 ಮಕ್ಕಳನ್ನು ರಕ್ಷಿಸಿದ ಸಿಸಿಬಿ, ಮಕ್ಕಳ ಕಲ್ಯಾಣ ಸಮಿತಿ - CCB Raid

ABOUT THE AUTHOR

...view details