ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬೆನ್ನಲ್ಲೇ ಮಲಯಾಳಂ ಚಿತ್ರರರಂಗದಲ್ಲಿ ಬಿರುಗಾಳಿಯೆದ್ದಿದೆ. ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಲ್ಲದೇ ಕೇರಳ ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿರುವ 'ಮಿ ಟೂ' ಹೋರಾಟದಲ್ಲಿ ನಟ ಜಯಸೂರ್ಯ ಕೂಡ ಆರೋಪಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಎದುರಿಸಿರುವ ನಟ - ರಾಜಕಾರಣಿ ಮುಖೇಶ್ ಚಲನಚಿತ್ರ ನೀತಿ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ನಟ ಜಯಸೂರ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ, ಜನಪ್ರಿಯ ನಟನ ವಿರುದ್ಧ ಸಾರ್ವಜನಿಕವಾಗಿ ಆರೋಪಗಳ ಮಳೆಯನ್ನೇ ಹರಿಸಿದ್ದ ನಟಿಯೋರ್ವರು ಇದೀಗ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ. ವರದಿಗಳ ಪ್ರಕಾರ, 2013ರಲ್ಲಿ ತೊಡುಪುಳದಲ್ಲಿ ನಡೆದ ಶೂಟಿಂಗ್ ವೇಳೆ ಜಯಸೂರ್ಯ ನಟಿಯನ್ನು ಹಿಡಿದಿದ್ದರು ಎಂದು ಆರೋಪಿಸಲಾಗಿದೆ. ಮಲಯಾಳಂ ಚಿತ್ರರಂಗದ ವಿವಾದಗಳಿಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಸ್ವೀಕರಿಸಿರುವ ಒಟ್ಟು 18 ದೂರುಗಳಲ್ಲಿ ಇದು ಕೂಡಾ ಒಂದು. ಆರೋಪಗಳ ಸಂಖ್ಯೆ ದಿನೇ ದಿನೆ ಏರುತ್ತಿದೆ.
ಐಪಿಎಸ್ ಅಧಿಕಾರಿ ಜಿ ಪೂಂಘಲಿ ಮತ್ತು ಐಪಿಎಸ್ ಆಫೀಸರ್ ಐಶ್ವರ್ಯಾ ಡೊಂಕ್ರೆ ನೇತೃತ್ವದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ದೂರುದಾರರಿಂದ ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು, 2008ರ ಶೂಟಿಂಗ್ ಸಂದರ್ಭ ನಟ ಜಯಸೂರ್ಯ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮತ್ತೋರ್ವ ಮಹಿಳಾ ನಟಿ ಆರೋಪಿಸಿದ್ದರು. ನಟ ತಮ್ಮ ಫ್ಲ್ಯಾಟ್‌ಗೆ ನನ್ನನ್ನು ಆಹ್ವಾನಿಸಿ ಹಿಂದಿನಿಂದ ತಬ್ಬಿಕೊಂಡು ಮುತ್ತಿಕ್ಕಿದ್ದರು ಎಂದು ನಟಿ ಆರೋಪಿಸಿದ್ದರು.