ನಾಳೆ ಭಾರತ ಸ್ವಾತಂತ್ರ್ಯ ದಿನಾಚರಿಸಲಿದೆ. ಸಾರ್ವತ್ರಿಕ ರಜೆಯ ಸದುಪಯೋಗ ಪಡೆಯಲು ಭಾರತೀಯ ಚಿತ್ರರಂಗ ಸಜ್ಜಾಗಿದೆ. ಅನೇಕ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್ ಫೈಟ್ ಪಕ್ಕಾ ಅಂತಿದ್ದಾರೆ ಸಿನಿಪಂಡಿತರು. ಅಭಿಮಾನಿಗಳು, ಸಿನಿಪ್ರಿಯರು ಯಾವ ಸಿನಿಮಾ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಆಗಸ್ಟ್ 15ರಂದು ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ
ದಕ್ಷಿಣ ಚಿತ್ರರಂಗದ ಸಿನಿಮಾಗಳು (ಕಲಾವಿದರ ಹೆಸರು ಸಹಿತ):
- ಕೃಷ್ಣಂ ಪ್ರಣಯ ಸಖಿ (ಕನ್ನಡ): ಗಣೇಶ್, ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ.
- ಗೌರಿ (ಕನ್ನಡ): ಸಮರ್ಜಿತ್ ಲಂಕೇಶ್, ನಾಯಕಿ ಸಾನ್ಯಾ ಅಯ್ಯರ್.
- ತಂಗಲಾನ್ (ತಮಿಳು): ವಿಕ್ರಮ್ ಮತ್ತು ಮಾಳವಿಕಾ ಮೋಹನನ್.
- ಡಬಲ್ ಐಸ್ಮಾರ್ಟ್ ಶಂಕರ್ (ತೆಲುಗು): ರಾಮ್ ಪೋತಿನೇನಿ ಮತ್ತು ಸಂಜಯ್ ದತ್.
- ಮಿಸ್ಟರ್ ಬಚ್ಚನ್ (ತೆಲುಗು): ರವಿತೇಜ, ಭಾಗ್ಯಶ್ರೀ ಬೋರ್ಸೆ, ರಶ್ಮಿಕಾ ಮಂದಣ್ಣ.
- ನೂನಕುಝಿ (ಮಲಯಾಳಂ): ಬೇಸಿಲ್ ಜೋಸೆಫ್, ಗ್ರೇಸ್ ಆ್ಯಂಟೋನಿ
- ರಘು ತಾತಾ (ತಮಿಳು): ಕೀರ್ತಿ ಸುರೇಶ್.
ಬಾಲಿವುಡ್ ಸಿನಿಮಾಗಳು (ಕಲಾವಿದರ ಹೆಸರು ಸಹಿತ):
- ಸ್ತ್ರೀ 2: ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ.
- ಖೇಲ್ ಖೇಲ್ ಮೇ: ಅಕ್ಷಯ್ ಕುಮಾರ್, ಫರ್ದೀನ್ ಖಾನ್, ಆದಿತ್ಯ ಸೀಲ್, ಆ್ಯಮಿ ವಿರ್ಕ್, ವಾಣಿ ಕಪೂರ್, ತಾಪ್ಸಿ ಪನ್ನು, ಪ್ರಜ್ಞಾ ಜೈಸ್ವಾಲ್.
- ವೇದಾ: ಜಾನ್ ಅಬ್ರಹಾಂ ಮತ್ತು ಶಾರ್ವರಿ ವಾಘ್.
ಈ ಚಿತ್ರಗಳೂ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಬಾಕ್ಸ್ ಆಫೀಸ್ ಅಂದಾಜು: (ಬುಧವಾರ ಬೆಳಗ್ಗಿನ ಮಾಹಿತಿ, ಅಂಕಿ ಅಂಶಗಳು ಏರಿಕೆ ಕಾಣುತ್ತಿವೆ):
ಸ್ತ್ರೀ 2:ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ ಅಭಿನಯದ ಈ ಚಿತ್ರ ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿ ಮುನ್ನಡೆ ಸಾಧಿಸಿದೆ. 9,717 ಶೋಗಳ 3,81,878 ಟಿಕೆಟ್‌ಗಳು ಮಾರಾಟ ಆಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ಮಾಹಿತಿ ಪ್ರಕಾರ ಈಗಾಗಲೇ 13 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಈ ಚಿತ್ರ ತನ್ನ ಮೊದಲ ದಿನ 50 ಕೋಟಿ ರೂಪಾಯಿಗಳೊಂದಿಗೆ ತೆರೆಕಾಣುವ ನಿರೀಕ್ಷೆಗಳಿವೆ.
ಖೇಲ್ ಖೇಲ್ ಮೇ: ಅಕ್ಷಯ್ ಕುಮಾರ್, ಫರ್ದೀನ್ ಖಾನ್, ಆದಿತ್ಯ ಸೀಲ್, ಆ್ಯಮಿ ವಿರ್ಕ್, ವಾಣಿ ಕಪೂರ್, ತಾಪ್ಸಿ ಪನ್ನು, ಪ್ರಜ್ಞಾ ಜೈಸ್ವಾಲ್ ಸೆರಿದಂತೆ ಬಹುತಾರಾಗಣದ ಕಾಮಿಡಿ ಡ್ರಾಮಾ ಈಗಾಗಲೇ 2,711 ಶೋಗಳಿಗೆ 15,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ವರದಿಗಳ ಪ್ರಕಾರ ಮೊದಲ ದಿನದ ಕಲೆಕ್ಷನ್ ಸರಿಸುಮಾರು 9 ಕೋಟಿ ರೂ. ಆಗಬಹುದು.
ವೇದಾ:ಈ ಆ್ಯಕ್ಷನ್ ಡ್ರಾಮಾದಲ್ಲಿ ಜಾನ್ ಅಬ್ರಹಾಂ ಮತ್ತು ಶಾರ್ವರಿ ವಾಘ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗಾಗಲೇ 3,603 ಶೋಗಳಿಗೆ 23,138 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, 56.57 ಲಕ್ಷ ರೂ.ನ ವ್ಯವಹಾರ ನಡೆಸಿದೆ. ತನ್ನ ಮೊದಲ ದಿನದ ಗಳಿಕೆ ವಿಚಾರದಲ್ಲಿ ಖೇಲ್ ಖೇಲ್ ಮೇ ಚಿತ್ರವನ್ನು ಮೀರಿಸುವ ಸಾಧ್ಯತೆ ಇದೆ.
ತಂಗಲಾನ್: ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಮ್ ಮತ್ತು ಮಾಳವಿಕಾ ಮೋಹನನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಅಡ್ವಾನ್ಸ್ ಟಿಕೆಟ್ ವಿಚಾರದಲ್ಲಿ ಈಗಾಗಲೇ 2.50 ಕೋಟಿ ರೂ. ಗಳಿಸಿದೆ. ಸರಿಸುಮಾರು 150 ಕೋಟಿ ರೂಪಾಯಿಯ ಬಿಗ್ ಬಜೆಟ್ ಚಿತ್ರ ಅತಿ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಮಿಸ್ಟರ್ ಬಚ್ಚನ್: ರವಿತೇಜ, ಭಾಗ್ಯಶ್ರೀ ಬೋರ್ಸೆ, ರಶ್ಮಿಕಾ ಮಂದಣ್ಣ ನಟನೆಯ ಕ್ರೈಮ್ ಡ್ರಾಮಾ 'ಮಿಸ್ಟರ್ ಬಚ್ಚನ್' ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ 'ರೈಡ್' ಅಧಿಕೃತ ರೀಮೇಕ್. ಅಡ್ವಾನ್ಸ್ ಸೇಲ್ಸ್ ವಿಚಾರದಲ್ಲಿ 30 ಲಕ್ಷ ರೂಪಾಯಿಗಳ ವ್ಯವಹಾರ ನಡೆಸಿದೆ. ದೇಶಾದ್ಯಂತ 17,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ನಾಳೆ 8 ರಿಂದ 10 ಕೋಟಿ ರೂಪಾಯಿಗಳವರೆಗೆ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ.
ಡಬಲ್ ಇಸ್ಮಾರ್ಟ್ ಶಂಕರ್: ರಾಮ್ ಪೋತಿನೇನಿ ಹಾಗೂ ಸಂಜಯ್ ದತ್ ಅಭಿನಯದ ಈ ಚಿತ್ರ 77,110 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ವರದಿಗಳ ಪ್ರಕಾರ ಈಗಾಗಲೇ 1.35 ಕೋಟಿ ರೂ. ಗಳಿಸಿದೆ.
ಒಟ್ಟಾರೆ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಹಲವು ಬಹುನಿರೀಕ್ಷಿತ ಚಿತ್ರಗಳು ಸಜ್ಜಾಗಿವೆ. ಅದಾಗ್ಯೂ ಬಾಕ್ಸ್ ಆಫೀಸ್ ಫೈಟ್ನ ಹೊಡೆತ ಈ ಚಿತ್ರಗಳ ಮೇಲೆ ಬೀಳಲಿದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ: ತಾರೆಯರು ಭಾಗಿ, ವಿಡಿಯೋ ನೋಡಿ - Pooja for Prosperity of Sandalwood