ಬಾಲಿವುಡ್ ತಾರಾ ದಂಪತಿ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿಗೆ ಪೋಷಕರಾಗಲಿದ್ದಾರೆ. ಇತ್ತೀಚೆಗಷ್ಟೇ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಈ ಕುರಿತು ಸಿಹಿ ಸುದ್ದಿ ಹಂಚಿಕೊಂಡಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳು ಸೆಲೆಬ್ರಿಟಿ ಕಪಲ್ಗೆ ಅಭಿನಂದನೆ ತಿಳಿಸಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಶೀಘ್ರದಲ್ಲೇ ತಂದೆಯಾಗಲಿರುವ ರಣ್ವೀರ್ ಕೆಲಸದಿಂದ ವಿರಾಮ ಪಡೆಯಲಿದ್ದಾರೆ.
ಪಿತೃತ್ವ ರಜೆಯ (Paternity leave) ತಯಾರಿಯಲ್ಲಿರುವ ದೀಪಿಕಾ ಪಡುಕೋಣೆ ಈಗಾಗಲೇ ತಮ್ಮ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಮತ್ತೊಂದೆಡೆ ರಣ್ವೀರ್ ಸಿಂಗ್, ಮುಂದಿನ ವರ್ಷದ ಡಾನ್ 3, ಶಕ್ತಿಮಾನ್ ಸೇರಿದಂತೆ ಕೆಲ ಪ್ರಾಜೆಕ್ಟ್‌ಗಳನ್ನು ಪ್ರಾರಂಭಿಸುವ ಮೊದಲಿನ ತಮ್ಮ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಪಿತೃತ್ವ ರಜೆ ಪಡೆಯುವ ಸಿದ್ಧತೆಯಲ್ಲಿದ್ದಾರೆ. ಈ ಮೂಲಕ ದೀಪಿಕಾ ಮತ್ತು ಮಗುವಿಗೆ ಹೆಚ್ಚು ಸಮಯ ಕೊಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ, 'ದೀಪ್ವೀರ್' ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಪೂರ್ವ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಾರಂಭಕ್ಕೂ ಮುನ್ನ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದರು. ಈವೆಂಟ್ನಲ್ಲಿ ಇಬ್ಬರೂ ಸಖತ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಫೆಬ್ರುವರಿಯಲ್ಲಿ ತಾವು ಪೋಷಕರಾಗಲಿರುವ ವಿಚಾರ ಹಂಚಿಕೊಂಡರು. ಮಗುವಿನ ಶೂಸ್, ಬಟ್ಟೆ, ಚಾಕೊಲೇಟ್, ಬಲೂನ್ ಒಳಗೊಂಡ ಪೋಸ್ಟ್ನ ಮಧ್ಯೆ 'ಸೆಪ್ಟೆಂಬರ್ 2024' ಎಂದು ಬರೆಯಲಾಗಿತ್ತು. ಅಲ್ಲಿಗೆ ಸೆಪ್ಟೆಂಬರ್‌ನಲ್ಲಿ ದೀಪಿಕಾ ಹೆರಿಗೆಯಾಗಲಿದ್ದಾರೆ, ಮಗು ಜನಿಸಲಿದೆ ಅನ್ನೋದು ಪಕ್ಕಾ ಆಗಿತ್ತು. ಬಹುಸಮಯದಿಂದ ಡೇಟಿಂಗ್ನಲ್ಲಿದ್ದ ಈ ಜೋಡಿ 2018ರಲ್ಲಿ ಇಟಲಿಯ ಲೇಕ್ ಕೊಮೋದಲ್ಲಿ ಹಸೆಮಣೆ ಏರಿದ್ದರು. ಕುಟುಂಬಸ್ಥರು, ಆತ್ಮೀಯರು ಸೇರಿ ಬೆರಳೆಣಿಕೆ ಜನರ ಸಮ್ಮುಖದಲ್ಲಿ ಅದ್ಧೂರಿ ಮದುವೆ ನಡೆದಿತ್ತು. ಐದೂವರೆ ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿ ಈ ಪ್ರೇಮಪಕ್ಷಿಗಳಿದ್ದಾರೆ.