ಮಹಾರಾಷ್ಟ್ರ: ಬಾಲಿವುಡ್ ನಟ ಗೋವಿಂದ ಅರುಣ್ ಅಹುಜಾ ಮತ್ತೊಮ್ಮೆ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ವರ್ಷಾ ನಿವಾಸದಲ್ಲಿ ಭೇಟಿ ಆಗಿದ್ದರು. ವಾಯವ್ಯ ಕ್ಷೇತ್ರದಿಂದ ಗೋವಿಂದ ಸ್ಪರ್ಧೆಗಿಳಿಯುವ ಚರ್ಚೆ ನಡೆಯುತ್ತಿದೆ. ಆದ್ರೆ, ಶಿಂಧೆ ಬಣದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಲೋಕಸಮರಕ್ಕೆ ಮುಹೂರ್ತ ನಿಗದಿ ಆಗಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 19ಕ್ಕೆ ಆರಂಭ ಆದರೆ, ಜೂನ್ 1ರ ವರೆಗೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿವಿಧ ಪಕ್ಷಗಳು ಒಂದರ ಹಿಂದೆ ಒಂದರಂತೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಿವೆ. ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾಗಿದ್ದಾರೆ. ಇದೀಗ ಮುಂಬೈನ ವಾಯವ್ಯ ಕ್ಷೇತ್ರಕ್ಕೆ ಬಾಲಿವುಡ್ ನಟ ಗೋವಿಂದ ಹೆಸರು ಕೇಳಿಬರುತ್ತಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಗೋವಿಂದ ರಾಜಕೀಯ ಜೀವನ: ಹಿಂದಿ ಚಿತ್ರರಂಗದಲ್ಲಿ ಬಹುಸಮಯದಿಂದ ಗುರುತಿಸಿಕೊಂಡಿರುವ ಗೋವಿಂದ 2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಬಿಜೆಪಿಯ ರಾಮ್ ನಾಯ್ಕ್ ವಿರುದ್ಧ ಸ್ಪರ್ಧಿಸಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದಿದ್ದ ನಟ, ಹೆಚ್ಚಿನ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಆ ಸಂದರ್ಭ ಗೋವಿಂದ ಯಶಸ್ಸಿನ ಉತ್ತುಂಗದಲ್ಲಿದ್ದರು. ಆ ಸಂದರ್ಭ ಯುವಜನತೆ, ಸಿನಿಮಾಪ್ರಿಯರಲ್ಲಿ ನಟನ ಬಗ್ಗೆ ಸಖತ್ ಕ್ರೇಜ್ ಇತ್ತು.