ಪಾಟ್ನಾ(ಬಿಹಾರ): ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2; ದಿ ರೂಲ್ ಚಿತ್ರದ ಟ್ರೇಲರ್ ಅನ್ನು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಭಾನುವಾರ ಸಂಜೆ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ನಡುವೆ ಅನಾವರಣಗೊಳಿಸಲಾಯಿತು. ನಿರೀಕ್ಷೆಯಂತೆ ಟ್ರೇಲರ್ ಅಭಿಮಾನಿಗಳ ಕಿಕ್ಕೇರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ 'ಫೈಯರ್' ಕ್ರಿಯೇಟ್ ಮಾಡಿದೆ.
ಒಂದು ರೀತಿ ಪಾಟ್ನಾ ಜನತೆಗೆ ಭಾನುವಾರ ಸೂಪರ್ ಸಂಡೇ ಆಗಿತ್ತು. ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ 'ಪುಷ್ಪ 2' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲೆಂದೇ ಅಪಾರವಾದ ಅಭಿಮಾನಿ ಬಳಗ ನೆರೆದಿತ್ತು. ಕೇಕೆ, ಚಪ್ಪಾಳೆ, ಶಿಳ್ಳೆ, ಕೂಗಾಟ, ಚೀರಾಟದ ನಡುವೆ ಟ್ರೇಲರ್ ಬಿಡುಗಡೆ ನಡೆಯಿತು.
ತಾರೆಯರನ್ನು ಕಾಣಲೆಂದೇ ಮೈದಾನದಲ್ಲಿ ಲಕ್ಷಾಂತರ ಪ್ರೇಕ್ಷಕರು ಜಮಾಯಿಸಿದ್ದರು. ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ವೇದಿಕೆಗೆ ಆಗಮಿಸುವ ಮುನ್ನವೇ ನೆರೆದಿದ್ದ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಪಡಬೇಕಾಯಿತು. ಮುಗಿಬೀಳುತ್ತಿದ್ದ ಸಿನಿಪ್ರೇಮಿಗಳನ್ನು ನಿಯಂತ್ರಿಸಲು ಲಘು ಲಾಠಿಪ್ರಹಾರ ನಡೆಸಬೇಕಾಯಿತು.
ಕಾರ್ಯಕ್ರಮದಲ್ಲಿ ಎಲ್ಲಿ ನೋಡಿದರೂ, ಎತ್ತ ಕಣ್ಣು ಹಾಯಿಸಿದರೂ ಜನಸ್ತೋಮ ತುಂಬಿ ತುಳುಕಾಡುತ್ತಿತ್ತು. ತಮ್ಮ ನೆಚ್ಚಿನ ನಟರನ್ನು ನೋಡಲು ನೂರಾರು ಜನ ಸೌಂಡ್ ಬಾಕ್ಸ್ಗಾಗಿ ನಿರ್ಮಿಸಿದ್ದ ಬೃಹತ್ ಟವರ್ ಏರಿದ್ದರು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ವೇದಿಕೆಗೆ ಆಗಮಿಸುತ್ತಿದ್ದಂತೆ ಅಲ್ಲಿಂದಲೇ ಕತ್ತಲೆಯಲ್ಲಿ ತಮ್ಮ ಮೊಬೈಲ್ ಬ್ಯಾಟರಿಗಳನ್ನು ಆನ್ ಮಾಡಿ ಕೈ ಬೀಸುವ ಮೂಲಕ ಅವರನ್ನು ಸ್ವಾಗತಿಸಿದರು.
ಪಾಟ್ನಾದಲ್ಲಿ ಭಾನುವಾರ ಸಂಜೆ ನಡೆದ ಪುಷ್ಪ 2 ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ (ETV Bharat) ಅಲ್ಲು ಅರ್ಜುನ್ 'ಪಾಟ್ನಾ ಜನತೆಯ ಈ ಪ್ರೀತಿಗೆ ಸಾಷ್ಟಾಂಗ ನಮಸ್ಕಾರ' ಎಂದರೆ, 'ಐ ಲವ್ ಯೂ ಪಾಟ್ನಾ' ಎಂದು ಹೇಳುವ ಮೂಲಕ ಗಾಂಧಿ ಮೈದಾನದಲ್ಲಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು. ಸಿನಿ ತಾರೆಯರೊಂದಿಗೆ ಬಿಹಾರ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಕೂಡ ಹಾಜರಿದ್ದರು.
ಪಾಟ್ನಾದಲ್ಲಿ ಭಾನುವಾರ ಸಂಜೆ ನಡೆದ ಪುಷ್ಪ 2 ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ (ETV Bharat) "ಬಿಹಾರದಲ್ಲಿ ಪ್ರಥಮ ಬಾರಿಗೆ ಇಂತಹ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೋಡಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಿಂದ ಹೊರಗೆ ಬಂದಿರುವುದು ಇದೇ ಮೊದಲು. ಇಂದಿನ ಭಾನುವಾರ ಅವರ ಸೂಪರ್ ಸಂಡೇ ಆಯಿತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಕಂಡು ಖಸತ್ ಖುಷಿ ಆಯಿತು. ಮುಂದೆಯೂ ದಕ್ಷಿಣ ಭಾರತದ ಸಿನಿಮಾಗಳ ಟ್ರೇಲರ್ ಲಾಂಚ್ ಆಗಬೇಕು. ಸದ್ಯ ಬಿಡುಗಡೆಯಾದ ಚಿತ್ರದ ಟ್ರೇಲರ್ ಅದ್ಭುತವಾಗಿದೆ. ನಮ್ಮ ಕುತೂಹಲ ಇಮ್ಮಡಿಗೊಳಿಸಿದೆ. ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡಲಿ" ಎಂದು ಅಭಿಮಾನಿಗಳು ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ಟ್ರೇಲರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು (ETV Bharat) ಟ್ರೇಲರ್ ಜೊತೆಗೆ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಮೈತ್ರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರ ಡಿಸೆಂಬರ್ 5ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಟ್ರೇಲರ್ ರಿಲೀಸ್: ಅದ್ಭುತ ಸಿನಿಮೀಯ ಅನುಭವಕ್ಕಾಗಿ ಸಜ್ಜಾಗಿ