ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ನಟಿ, ನಿರ್ಮಾಪಕಿಯಾಗಿ ಮಾತ್ರವಲ್ಲದೇ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜನಪ್ರಿಯ ತಾರೆ, ನಿರ್ದೇಶಕ ಎಸ್ಎಸ್ ರಾಜಮೌಳಿ ನೀಡಿರೋ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವದಾದ್ಯಂತ ಸದ್ದು ಮಾಡಿದ ಆರ್ಆರ್ಆರ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕ ಎಸ್ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದರು. ಇದೀಗ ಬ್ಯುಸಿನೆಸ್ ಮ್ಯಾಗಜಿನ್ ಜೊತೆಗಿನ ಸಂದರ್ಶನದಲ್ಲಿ ತಮಗೆ ರಾಜಮೌಳಿ ಅವರು ನೀಡಿದ ಕೆಲ ಅಮೂಲ್ಯ ಸಲಹೆಗಳನ್ನು ಆಲಿಯಾ ಹಂಚಿಕೊಂಡಿದ್ದಾರೆ. ಅವರ ಈ ಬುದ್ಧಿವಂತಿಕೆಯ ಮಾತುಗಳು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದವು? ಸಿನಿಮಾಗಳ ಆಯ್ಕೆ ಮತ್ತು ಪ್ರೇಕ್ಷಕರೊಂದಿಗೆ ಬಾಂಧವ್ಯವನ್ನು ಬೆಸೆಯಲು ಹೇಗೆ ಸಹಾಯ ಮಾಡಿವೆ ಎಂಬುದನ್ನು ನಟಿ ಈ ಸಂದರ್ಶನದಲ್ಲಿ ಬಹಿರಂಗಪಡಿಸಿದರು.
ಸ್ಕ್ರಿಪ್ಟ್ಗಳನ್ನು ಆಯ್ಕೆ ಮಾಡುವ ವಿಚಾರವಾಗಿ ಮಾತನಾಡುವ ವೇಳೆ ಆಲಿಯಾ, ಆರ್ಆರ್ಆರ್ ನಿರ್ದೇಶಕ ರಾಜಮೌಳಿ ಅವರೊಂದಿಗಿನ ಮಾತುಕತೆಯನ್ನು ಉಲ್ಲೇಖಿಸಿದರು. ಸಿನಿಮಾಗಳನ್ನು ಆಯ್ಕೆ ಮಾಡುವ ಬಗ್ಗೆ ನಟಿಯು ನಿರ್ದೇಶಕರಲ್ಲಿ ಸಲಹೆ ಕೇಳಿದ್ದ ಸಂದರ್ಭ, ರಾಜಮೌಳಿ ಆಲಿಯಾಗೆ ಸಲಹೆ ನೀಡಿದ್ದರು. "ನನ್ನ ವೃತ್ತಿಜೀವನದ ಆರಂಭದಲ್ಲಿ ಪ್ರಪಂಚದಲ್ಲೇ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗುವುದು, ವಿಶೇಷವಾಗಿ ನಾನು ಮಾಡುವ ಸಿನಿಮಾಗಳು ಮತ್ತು ನಾನು ನಿರ್ವಹಿಸುವ ಪಾತ್ರಗಳಿಗೆ ಪ್ರೀತಿ ಗಳಿಸುವುದು ನನ್ನ ಗುರಿಯಾಗಿತ್ತು'' ಎಂಬುದನ್ನು ಆಲಿಯಾ ಉಲ್ಲೇಖಿಸಿದರು.