'ಮೆಟ್ ಗಾಲಾ' ಎಂಬುದು ವಿಶ್ವ ಪ್ರಸಿದ್ಧ ಫ್ಯಾಶನ್ ಈವೆಂಟ್. ಪ್ರತೀ ವರ್ಷ ಮೇ ತಿಂಗಳ ಮೊದಲ ಸೋಮವಾರ (ಭಾರತದಲ್ಲಿ ಮಂಗಳವಾರ ಮುಂಜಾನೆ) ನ್ಯೂಯಾರ್ಕ್ನಲ್ಲಿ ಈ ಫ್ಯಾಶನ್ ಗಾಲಾ ಸಮಾರಂಭ ನಡೆಯುತ್ತದೆ. ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಸೀರೆಯುಟ್ಟು ಅದ್ಭುತವಾಗಿ ಕಾಣಿಸಿಕೊಂಡರು.
ಬಾಲಿವುಡ್ ಬಹುಬೇಡಿಕೆಯ ತಾರೆ ಆಲಿಯಾ ಭಟ್ ಅವರಿಗೆ ಮೆಟ್ ಗಾಲಾ ಹೊಸ ಅನುಭವವೇನಲ್ಲ. ಪ್ರತಿಷ್ಠಿತ ಸಮಾರಂಭದಲ್ಲಿ ಸತತವಾಗಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದು, 2023ರಲ್ಲಿ ಚೊಚ್ಚಲ ಪ್ರವೇಶ ಮಾಡಿದ್ದರು. ಬೆರಗುಗೊಳಿಸುವಂಥ ಸಬ್ಯಸಾಚಿ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಆಲಿಯಾ ಪ್ರೇಕ್ಷಕರು ಮತ್ತು ಛಾಯಾಗ್ರಾಹಕರ ಗಮನ ಸೆಳೆದರು.
ಈ ವರ್ಷದ ಮೆಟ್ ಗಾಲಾ ಥೀಮ್ 'ಸ್ಲೀಪಿಂಗ್ ಬ್ಯೂಟೀಸ್: ರೀವೇಕನಿಂಗ್ ಫ್ಯಾಶನ್'. ಈವೆಂಟ್‌ಗೆ ತಾವು ಆಯ್ಕೆ ಮಾಡಿಕೊಂಡ ಉಡುಪಿನ ಬಗ್ಗೆ ಮಾತನಾಡಿದ ಆಲಿಯಾ ಭಟ್, "ಈವೆಂಟ್‌ನಲ್ಲಿ ಎರಡನೇ ಬಾರಿ ಭಾಗಿಯಾಗಿದ್ದೇನೆ. ಆದರೆ ನಾನು ಮೊದಲ ಬಾರಿಗೆ ಸೀರೆ ಧರಿಸಿದ್ದೇನೆ. ನಾನು 'ಗಾರ್ಡನ್ ಆಫ್ ಟೈಮ್' ಡ್ರೆಸ್ ಕೋಡ್ ಅನ್ನು ಪರಿಗಣಿದ್ದೇನೆ. ಇದು ಟೈಮ್‌ಲೆಸ್ ಎಂದು ನಾನು ಭಾವಿಸಿದ್ದೇನೆ. ಸೀರೆಗಿಂತ ಹೆಚ್ಚು ಕಾಲಾತೀತ ಸೌಂದರ್ಯ ಮತ್ತೊಂದಿಲ್ಲ" ಎಂದು ತಿಳಿಸಿದರು.
ಮೆಟ್ ಗಾಲಾ ನೋಟ ವೈರಲ್ ಆಗೋ ಮುನ್ನ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಶೇರ್ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಕುತೂಹಲಕಾರಿ ಫೋಟೋ ಹಂಚಿಕೊಂಡ ನಟಿ "ಮೆಟ್ ಸೆಟ್ ಗೋ" ಎಂದು ಬರೆದುಕೊಂಡಿದ್ದರು. ಸೀರೆಯಲ್ಲಿನ ನಟಿಯ ಬೆರಗುಗೊಳಿಸುವ ನೋಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾದರು. ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದ ಬಗ್ಗೆ ನಟಿಗೆ ಮೆಚ್ಚುಗೆ ವ್ಯಕ್ತವಾದವು. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಹಂಚಿಕೊಂಡ ಕೆಲವೇ ಕೆಲ ಗಂಟೆಗಳ ಅಂತರದಲ್ಲಿ ಆಲಿಯಾ ಐದು ಸರಣಿ ಕಲರ್ಫುಲ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.