ಐಶ್ವರ್ಯಾ ರೈ ಬಚ್ಚನ್. ಅತಿಲೋಕ ಸುಂದರಿ. ಗುಣ, ನಡೆ-ನುಡಿ, ಸಂಪತ್ತಿನಲ್ಲೂ ಸಿರಿವಂತೆ. 'ವಿಶ್ವ ಸುಂದರಿ' ಪಟ್ಟ ಮುಡಿಗೇರಿಸಿಕೊಂಡಿದ್ದು 1994ರಲ್ಲಾದರೂ ಸರ್ವಕಾಲಕ್ಕೂ 'ವಿಶ್ವ ಸುಂದರಿ' ಕೀರ್ತಿಯಿಂದಲೇ ಗುರುತಿಸಿಕೊಳ್ಳುವ ರೂಪವತಿ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ತಮ್ಮ ನಡೆ-ನುಡಿ, ಸಾಧನೆಯಿಂದಲೂ ಜಾಗತಿಕ ಮಟ್ಟದಲ್ಲಿ ಭಾರತ, ದಕ್ಷಿಣ ಕನ್ನಡದ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.
ತುಳುನಾಡ ಮಗಳೆಂಬ ಖ್ಯಾತಿ ಕೂಡಾ ಈ ಬ್ರೈನ್ ವಿತ್ ಬ್ಯೂಟಿಗಿದೆ. ಸದ್ಯ ಸಂಸಾರದಲ್ಲಿ ಬಿರುಕು ಎನ್ನುವ ವದಂತಿಗಳು ವ್ಯಾಪಕವಾಗಿದ್ದು, ಬಹುಬೇಡಿಕೆಯ ನಟಿಯ ಹಲವು ವಿಡಿಯೋಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಅದರಂತೆ, ತುಳುನಾಡ ಸಂಪ್ರದಾಯ ಮರೆಯದ, ತುಳುಭಾಷಾ ಪ್ರೇಮ ಸಾರುವ ವಿಡಿಯೋ ವೈರಲ್ ಆಗಿದೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಾಲಿವುಡ್ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದು, ಮೂಲತಃ ದಕ್ಷಿಣ ಕನ್ನಡದವರು ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವೇ. ಹೆಸರಾಂತ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್, ಫ್ಯಾಶನ್ನ ಪ್ರತೀಕದಂತಿದ್ದಾರೆ. ಸಿನಿಮಾಗಳಿಂದ ದೂರವುಳಿದಿದ್ದರೂ ಕೂಡಾ ಜಾಗತಿಕ ವೇದಿಕೆಗಳಲ್ಲಿ ಸುಪ್ರಸಿದ್ಧ ಫ್ಯಾಶನ್ ಬ್ರ್ಯಾಂಡ್ಗಳನ್ನು ಪ್ರಚಾರ ಮಾಡುತ್ತಲೇ ಇರುತ್ತಾರೆ. ಸ್ಥಳ, ಸಮಯಕ್ಕೆ ತಕ್ಕಂತೆ ಅದೆಷ್ಟೇ ವಿಕಸನಗೊಳ್ಳುತ್ತಾ ಬಂದರೂ ಕೂಡಾ ತಮ್ಮ 'ಮೂಲ ಮರೆತಿಲ್ಲ' ಎಂಬುದು ಹೆಮ್ಮೆಯ ವಿಷಯ. ಮಂಗಳೂರಿನ ಸಂಸ್ಕೃತಿ, ಬಂಟ್ಸ್ ಸಂಪ್ರದಾಯ, ತುಳು ಭಾಷೆ ಮೇಲಿನ ಅವರ ಒಲವು ಆಗಾಗ್ಗೆ ಸಾಬೀತಾಗುತ್ತಿರುತ್ತದೆ. ಸಿನಿಜಗತ್ತನ್ನು ಪ್ರವೇಶಿಸಿದ ಬಳಿಕ ಒಂದಿಷ್ಟು ಬದಲಾವಣೆಗಳು ಸಹಜ. ಆದ್ರೆ ಐಶ್ವರ್ಯಾ ರೈ ಮಾತ್ರ ತಾನು ತುಳುನಾಡ ಮಗಳು ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?:ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋ ದಕ್ಷಿಣ ಕನ್ನಡದಲ್ಲಿ ನಡೆದ ಒಂದು ಕಾರ್ಯಕ್ರಮ. ವೇದಿಕೆಯಲ್ಲಿ ಐಶ್ವರ್ಯಾ ತುಳು ಭಾಷೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದರು.
''ಈ ವರ್ಷ ಇಡೆಗ್ ಬರ್ರೆ ಯಂಕ್ ಬೋಡಿತ್ತುಂಡು. ಆಂಡ ಯೆನ್ನ ಬೇಲೆಡ್ದು ಆವೋಂದಿತ್ತಿಜಿ. ಈ ಸರ್ತಿ ಆಂಡ್. ಆಯೋಜಕೆರ್ ನಾಲ್ ತಿಂಗೊಲು ದುಂಬೇ ಪೊಪ್ಪಡ ಡೇಟ್ ಪಂಡೆರ್. ಅಯ್ಕ್ ಯಾನ್ ಪಂಡೆ ಉಂದು ಬೆಸ್ಟ್ ವೆಕೇಶನ್ ಅಂದ್, ದಾಯೆಪಂಡಾ ಫಸ್ಟ್ ಟೈಮ್ ಯಾನ್ ಯೆನ್ನ ಕಂಡನಿನೊಟ್ಟು ಬರೋಂದುಲ್ಲೆ''.