ಮೋಹಕ ತಾರೆ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಒಂದು ಸಮಯದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚಿದವರು. ಬ್ಯೂಟಿಫುಲ್ ಅಂಡ್ ಬೋಲ್ಡ್ ನಟಿ. ಕನ್ನಡ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಕೆಲ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡ ಸ್ಯಾಂಡಲ್ವುಡ್ ಕ್ವೀನ್. ರಾಜಕೀಯ ಪ್ರವೇಶಿಸಿ, ಒಂದು ಬಾರಿ ಸಂಸದೆ ಆದ ರಮ್ಯಾ ಕೆಲಕಾಲ ಚಿತ್ರರಂಗದಿಂದ ದೂರು ಉಳಿದಿದ್ದರು. ಕನ್ನಡ ಚಿತ್ರರಂಗ ಭಾರತದಾದ್ಯಂತ ಸದ್ದು ಮಾಡಿದ ಸಮಯದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಒಂದು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡರು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿ ಗಮನ ಸೆಳೆದರು. ಆದರೆ, ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರೆ ಅಂತಾ ಅಂದುಕೊಂಡವರಿಗೀಗ ಒಂದು ಸ್ಯಾಡ್ ನ್ಯೂಸ್ ಸಿಕ್ಕಿದೆ.
ಹೌದು, ನಟರಾಕ್ಷಸ ಖ್ಯಾತಿಯ ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರದಿಂದ ರಮ್ಯಾ ಹೊರನಡೆದಿದ್ದಾರೆ. ಡೇಟ್ಸ್ ಸಮಸ್ಯೆಯಿಂದಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಚಿತ್ರತಂಡದವರಿಗೆ ಒಳ್ಳೆಯದಾಗಲಿ ಎಂದು ಶುಭ ನುಡಿದು, ಸೋಷಿಯಲ್ ಮೀಡಿಯಾದಲ್ಲಿ ಒಂದು ನೋಟ್ ಹಾಕಿದ್ದಾರೆ. ಅಲ್ಲಿಗೆ, ರಮ್ಯಾ ಬದಲಿಗೆ ಮತ್ತೋರ್ವ ನಾಯಕಿ ಹುಡುಕಿ ತರುವ ಜವಾಬ್ದಾರಿ ಚಿತ್ರತಂಡದ ಹೆಗಲೇರಿದೆ.
ಅದ್ಯಾಕೋ ರಮ್ಯಾ ಕಂಬ್ಯಾಕ್ ಕಗ್ಗಂಟಾಗುತ್ತಿದೆ. ಆರ್ಯನ್ ಚಿತ್ರದ ನಂತರ ರಮ್ಯಾ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಅವರು ಮತ್ತೆ ಚಿತ್ರರಂಗಕ್ಕೆ ಬರಬೇಕು, ಇನ್ನಷ್ಟು ಚಿತ್ರಗಳಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಈ ಆಸೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಳ್ಳುತ್ತಲೇ ಇದ್ದರು. ಆದರೆ, ರಮ್ಯಾ ಮಾತ್ರ ಚಿತ್ರರಂಗದಿಂದ ದೂರವೇ ಇದ್ದಾರೆ.