ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಸೈಬರ್ ಸೆಲ್ನ ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ ಪಡೆದಿದೆ. ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ನಟನನ್ನು ಛತ್ತೀಸ್‌ಗಢದ ಜಗದಲ್‌ಪುರದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಅಧಿಕಾರಿಗಳ ಕಣ್ತಪ್ಪಿಸಿ ಸರಿಸುಮಾರು 40 ಗಂಟೆಗಳ ಕಾಲ ಛತ್ತೀಸ್ಗಢದಲ್ಲಿ ತಲೆಮರೆಸಿಕೊಂಡಿದ್ದ ಸಾಹಿಲ್ ಖಾನ್ನನ್ನು ವಶಕ್ಕೆ ಪಡೆಯಲು ಮುಂಬೈ ಕ್ರೈಂ ಬ್ರಾಂಚ್ನ ವಿಶೇಷ ತನಿಖಾ ತಂಡ ಮಹತ್ವದ ಕಾರ್ಯಾಚರಣೆ ಕೈಗೊಂಡಿತ್ತು. ತನ್ನ ರಕ್ಷಣೆಗೆ ಮುಂಚಿತವಾಗಿ ಜಾಮೀನು ಪಡೆಯಲು ಪ್ರಯತ್ನಿಸಿದರೂ ಹೈಕೋರ್ಟ್ ನಿರ್ಧಾರದಿಂದ ನಟ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತಿಮವಾಗಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.
ಬೆಟ್ಟಿಂಗ್ ಸೈಟ್ ನಡೆಸುತ್ತಿರುವುದು ಮತ್ತು ಅಕ್ರಮ ಬೆಟ್ಟಿಂಗ್ ಪ್ರಚಾರದ ಆರೋಪಗಳು ಸಾಹಿಲ್ ಖಾನ್ ಮೇಲಿದ್ದು, ಮುಂಬೈನಿಂದ ಪರಾರಿಯಾಗಿದ್ದರು. ಆಗಾಗ್ಗೆ ತಮ್ಮ ಸ್ಥಳ ಬದಲಾಯಿಸುತ್ತಿದ್ದರು. ಬೆಟ್ಟಿಂಗ್ ಪ್ರಕರಣದಲ್ಲಿ ನಟ ಶಾಮೀಲಾಗಿರುವುದು ಮತುಂಗಾ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2023ರ ಡಿಸೆಂಬರ್ನಲ್ಲಿ ಸಾಹಿಲ್ ಖಾನ್, ಇತರೆ ಮೂವರಿಗೆ ಮುಂಬೈ ಸೈಬರ್ ಸೆಲ್ನ ಎಸ್ಐಟಿ ವಿಚಾರಣೆಗೆ ಕರೆಯಿತು. ಆದರೆ ಸಮನ್ಸ್‌ಗೆ ಪ್ರತಿಕ್ರಿಯಿಸಲು ಖಾನ್ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಹಚ್ಚಲು ಪ್ರಯತ್ನಗಳು ತೀವ್ರಗೊಂಡಿದ್ದವು.