ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ (ಅಭಿಮಾನಿಗಳು) ಧನ್ಯವಾದ ತಿಳಿಸಿದ್ದಲ್ಲದೆ, ಕ್ಷಮೆಯನ್ನೂ ಕೋರಿದ್ದಾರೆ. ಅಲ್ಲದೆ, ಮೂವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?:"ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ, ಧನ್ಯವಾದ ಎನ್ನಲಾ, ನಾನು ಯಾವುದೇ ಪದ ಬಳಸಿದರೂ ತುಂಬಾ ಕಡಿಮೆ. ನೀವು ತೋರಿರುವ ಪ್ರೀತಿಯನ್ನು ಯಾವ ರೀತಿ ಮರಳಿಸಲಿ ಎಂದು ತಿಳಿಯುತ್ತಿಲ್ಲ. ಮುಖ್ಯವಾದ ವಿಷಯವೆಂದರೆ, ನನ್ನ ಹುಟ್ಟಹಬ್ಬ. ನೀವು ತುಂಬಾನೆ ಆಸೆಪಟ್ಟಿರುತ್ತೀರಿ, ನನಗೂ ಕೂಡ ತುಂಬಾನೇ ಆಸೆ ಇತ್ತು ಬರ್ತ್ ಡೇಯನ್ನು ನಿಮ್ಮ ಜೊತೆ ಆಚರಿಸಿಕೊಳ್ಳಬೇಕೆಂದು. ಆದರೆ ಅದು ಈ ಸಲ ಸಾಧ್ಯವಾಗುತ್ತಿಲ್ಲ, ಯಾಕೆಂದರೆ ತುಂಬಾ ಸಮಯದವರೆಗೆ ನನಗೆ ನಿಂತುಕೊಳ್ಳಲು ಆಗುವುದಿಲ್ಲ. ಇಂಜೆಕ್ಷನ್ ಪವರ್ ಇರುವವರೆಗೆ ಮಾತ್ರ ನನಗೆ ನೋವು ಇರಲ್ಲ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುತ್ತಿ. ನಾನು ಅದನ್ನು ಮಾಡಿಸಿಕೊಳ್ಳಲೇಬೇಕು. ನಾನು ಒಪ್ಪಿಕೊಂಡಿರುವ ಸಿನಿಮಾ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಯಾಕೆಂದರೆ ನನಗೋಸ್ಕರ ಅವರು ಕಾಯ್ದಿದ್ದಾರೆ. ದಯಮಾಡಿ ಇದೊಂದು ಸಲ ನನ್ನ ಸೆಲೆಬ್ರಿಟಿಗಳು ಕ್ಷಮಿಸಿ. ಮುಂದೊಂದು ದಿನ ಖಂಡಿತಾ ಸಿಗುತ್ತೇನೆ, ಧನ್ಯವಾದ ಹೇಳುತ್ತೇನೆ" ಎಂದು ದರ್ಶನ್ ಮನವಿ ಮಾಡಿದ್ದಾರೆ.
ಊಹಾಪೋಹಗಳಿಗೆ ಕಿವಿಗೊಡಬೇಡಿ:"ದಯಮಾಡಿ ಯಾವ ಊಹಾಪೋಹಗಳನ್ನೂ ನನ್ನ ಸೆಲೆಬ್ರಿಟಿಗಳು ನಂಬಬಾರದು. ನಿರ್ಮಾಪಕರೊಬ್ಬರಿಗೆ ಅಡ್ವಾನ್ಸ್ ಹಣ ವಾಪಸ್ ಕೊಟ್ಟೆ, ಸೂರಪ್ಪ ಬಾಬು ಅವರಿಗೆ ತುಂಬಾ ಕಮಿಟ್ಮೆಂಟ್ಗಳು ಇದ್ದವು. ನಿಮಗೆಲ್ಲ ಗೊತ್ತಿರುವಂತೆ ಸಮಯವೆಲ್ಲ ವೇಸ್ಟ್ ಆಗೋಗಿದೆ. ಹೀಗಾಗಿ, ಆ ಹಣವನ್ನು ವಾಪಸ್ ಕೊಟ್ಟೆ. ಮುಂದೊಂದು ದಿನ ಅವರೊಂದಿಗೆ ಸಿನಿಮಾ ಮಾಡೋಣ ಎಂದಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
"ನಾನು, ಪ್ರೇಮ್ ಖಂಡಿತಾ ಸಿನಿಮಾ ಮಾಡುತ್ತೇವೆ. ಅದು ನಮ್ಮ ಗುರುಗಳು ಹಾಗೂ ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಅವರ ಆಸೆ. ಪ್ರೊಡಕ್ಷನ್ ಬ್ಯುಸಿ ಇಲ್ಲದೇ ಇರುವವರ ಜೊತೆ ಸಿನಿಮಾ ಮಾಡಬೇಕು. ಯಾಕೆಂದರೆ, ಸಿನಿಮಾ ನಿರ್ಮಾಪಕನಾದವನಿಗೆ ತುಂಬಾ ಕೆಲಸಗಳಿರುತ್ತವೆ. ಹೀಗಾಗಿ, ಫ್ರೀಯಾಗಿರುವವರ ಜೊತೆ ಚಿತ್ರ ಮಾಡಬೇಕು" ಎಂದು ದರ್ಶನ್ ಹೇಳಿದ್ದಾರೆ.
"ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನಂತವನ ಮೇಲೆ ಇರೋದಕ್ಕೆ ನಾನು ಯಾವಾಗಲೂ ಚಿರಋಣಿ. ಪ್ರೀತಿಗಿಂತ ಹೆಚ್ಚಾಗಿ ನೀವು ಬೆಂಬಲ ನೀಡಿದ್ದೀರಿ. ಅದನ್ನು ತೀರಿಸಲು ನನ್ನಿಂದ ಆಗಲ್ಲ. ನನ್ನ ನಮ್ಮಿಕೊಂಡವರೆಲ್ಲರಿಗೂ ಋಣಿಯಾಗಿರುತ್ತೇನೆ" ಎಂದು ತಿಳಿಸಿದ್ದಾರೆ.