ನಟ ದರ್ಶನ ಅಭಿನಯಿಸಿದ್ದ ಕಾಟೇರ ಸಿನಿಮಾ ರಾಜ್ಯದೆಲ್ಲೆಡೆ ಅಮೋಘ ಪ್ರದರ್ಶನ ಕಂಡು 50 ದಿನಗಳನ್ನು ಪೂರೈಸಿದೆ. ಈ ನಡುವೆ ಕಾಟೇರ ಸಿನಿಮಾದ ಟೈಟಲ್ ವಿಚಾರವಾಗಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವೆ ಜಟಾಪಟಿ ನಡೆದಿದೆ. ಕಾಟೇರ ಟೈಟಲ್ ನಾನು ಕೊಟ್ಟಿದ್ದು, ಆ ಕಥೆ ನಾನು ಮಾಡಿಸಿದ್ದು ಎಂದ ಉಮಾಪತಿ ಅವರಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ತೆರೆ ಕಂಡ ಕನ್ನಡ ಹಾಸ್ಯ ನಟ ಚಿಕ್ಕಣ್ಣನ ಬಹು ನಿರೀಕ್ಷಿತ "ಉಪಾಧ್ಯಕ್ಷ" ಸಿನಿಮಾಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದರು. ಹೀಗಾಗಿ ಸಿನಿಮಾದ ಪ್ರಮೋಶನ್ ವೇಳೆ ಉಮಾಪತಿ ಶ್ರೀನಿವಾಸ್ ಅವರು ಕಾಟೇರ ಚಿತ್ರದ ಬಗ್ಗೆ ಮಾತಾನಾಡಿದ್ದರು. ಕಾಟೇರ ಟೈಟಲ್ ನಾನು ಕೊಟ್ಟಿದ್ದು, ಆ ಸಿನಿಮಾ ಕಥೆ ನಾನು ಮಾಡಿಸಿದ್ದೆ. ಕಾರಣಾಂತರ ಸಿನಿಮಾ ಮಾಡುವುದಕ್ಕೆ ಆಗಲಿಲ್ಲ ಎಂದು ಹೇಳಿದ್ದರು.
ಇದರ ಬೆನ್ನೆಲ್ಲೇ ಸೋಮವಾರ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಕಾಟೇರ ಸಿನಿಮಾದ 50 ದಿನದ ಸಕ್ಸಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ದರ್ಶನ ಅವರು ಕಾಟೇರ ಟೈಟಲ್ ವಿಚಾರ ಪ್ರಸ್ತಾಪಿಸಿ ಏಕಾಏಕಿ ಉಮಾಪತಿ ವಿರುದ್ಧ ಗುಡುಗಿದ್ದರು. "ನಿಮಗೆ ರಾಬರ್ಟ್ ಚಿತ್ರದ ಕಥೆ ಕೊಟ್ಟಿದ್ದೇ ನಾನು. ಮದಗಜ ಟೈಟಲ್ ನಾನು ಕೊಡಿಸಿದ್ದು, ಕಾಟೇರ ಟೈಟಲ್ ಕೂಡ ನಾನೇ ಹೇಳಿದ್ದೆ" ಎಂದು ದರ್ಶನ್ ನೇರವಾಗಿ ಉಮಾಪತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಮಾಪತಿ ಶ್ರೀನಿವಾಸ್, ನಾನು ಕಾಟೇರ ಬಗ್ಗೆ ಮಾತನಾಡಿರುವುದು ನಿಜ. ಮಾತನಾಡಿಲ್ಲ ಅಂತ ಹೇಳೋಕೆ ನನಗೆ ಭಯ ಏನಿಲ್ಲ. ನಮ್ಮ ದೇಹ ತೂಕ ಇದ್ದರೆ ಸಾಲದು ನಾವು ಆಡೋ ಮಾತಲ್ಲೂ ತೂಕ ಇರಬೇಕು. ಇವತ್ತಿನ ಅವರ ಹೇಳಿಕೆಗೆ ಅವರೇ ಜವಾಬ್ದಾರರು ಎಂದಿದ್ದಾರೆ.
ಇದನ್ನೂ ಓದಿ :ಸೆಟ್ಟೇರಿತು ಪ್ರಜ್ವಲ್ ದೇವರಾಜ್ ಕರಾವಳಿ ಸಿನಿಮಾ ಸ್ಪೆಷಲ್ ಅಟ್ರಾಕ್ಷನ್ ಗಜಗಾತ್ರದ ಕೋಣ