ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಐಕಾನಿಕ್ ಕಪಲ್ ಎಂದೇ ಫೇಮಸ್. ಟ್ರೋಲ್, ಟೀಕೆ, ವದಂತಿಗಳ ನಡುವೆಯೂ ಈ ದಂಪತಿ ಚಿತ್ರರಂಗದ ಪವರ್ಫುಲ್ ಆ್ಯಂಡ್ ಬ್ಯೂಟಿಫುಲ್ ಕಪಲ್ ಆಗಿ ಜನಪ್ರಿಯರು. ತಾರಾ ದಂಪತಿಯ ನಡುವೆ ಎಲ್ಲವೂ ಸರಿ ಇಲ್ಲ, ಸಂಬಂಧದಲ್ಲಿ ಬಿರುಕು ಮೂಡಿದೆ ಅನ್ನೋದು ಬಹುದಿನಗಳ ವದಂತಿ. ಇಂಥ ಅಂತೆ-ಕಂತೆಗಳ ನಡುವೆ ಆಗಾಗ್ಗೆ ಜೋಡಿಗೆ ಸಂಬಂಧಿಸಿದ ವಿಡಿಯೋಗಳು, ವಿಷಯಗಳು ಸಖತ್ ಸದ್ದು ಮಾಡುತ್ತವೆ.
ಅದರಂತೆ ಇದೀಗ, ಐಶ್ವರ್ಯಾರ 2016ರ ಚಿತ್ರ 'ಸರಬ್‌ಜಿತ್'ನ ಪ್ರಥಮ ಪ್ರದರ್ಶನ ಈವೆಂಟ್ನಿಂದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಪ್ರಮೋಶನಲ್ ಈವೆಂಟ್ನಲ್ಲಿ ನಡೆದ ಈ ಘಟನೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮುಜುಗರಕ್ಕೊಳಗಾಗಿದ್ದು, ವಿಡಿಯೋ ನೋಡಿದ ಅನೇಕರಿಗೆ ಶಾಕ್ ಆಗಿತ್ತು. ಅಭಿಷೇಕ್ ಅವರದ್ದು ಕೋಲ್ಡ್ ರಿಯಾಕ್ಷನ್ನಂತೆ ತೋರಿದ್ದು, ಐಶ್ವರ್ಯಾ ಮುಜುಗರಕ್ಕೊಳಗಾಗಿದ್ದರು.
'ಸರಬ್‌ಜಿತ್' ಪ್ರೀಮಿಯರ್‌ನಲ್ಲಿ ಬಚ್ಚನ್ ಕುಟುಂಬ ಸೇರಿದಂತೆ ಹಲವು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ಈವೆಂಟ್ ಮುಂದುವರೆದಂತೆ, ಉತ್ಸುಕರಾದ ಮಾಧ್ಯಮದವರು ತಾರಾ ದಂಪತಿಯಲ್ಲಿ ಒಟ್ಟಿಗೆ ಪೋಸ್ ನೀಡುವಂತೆ ವಿನಂತಿಸಿದರು. ಮಾಧ್ಯಮದವರ ಮನವಿಗೆ ಐಶ್ವರ್ಯಾ ನಯವಾಗಿ ಪ್ರತಿಕ್ರಿಯಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಷೇಕ್ ಅವರನ್ನು ಕರೆದರು. ಆದಾಗ್ಯೂ, ಅಭಿಷೇಕ್ ಆ ಕೂಡಲೇ ಪ್ರತಿಕ್ರಿಯಿಸಲಿಲ್ಲ. ಅವರಿಗೆ ಪತ್ನಿಯ ಮಾತು ಕೇಳಿಸಲಿಲ್ಲವೇ ಅಥವಾ ನಿರ್ಲಕ್ಷಿಸಿದರೇ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಅದಾದ ಸ್ವಲ್ಪ ಸಮಯದ ನಂತರ, ಐಶ್ವರ್ಯಾ ಅಭಿಷೇಕ್ ಅವರನ್ನು ಮತ್ತೆ ಕರೆದರು, ಕ್ಯಾಮರಾಗಳಿಗೆ ಪೋಸ್ ನೀಡುವಂತೆ ನಯವಾಗಿ ಕೇಳಿಕೊಂಡರು. ಅಂತಿಮವಾಗಿ ಪತ್ನಿಯ ಮಾತು ಒಪ್ಪಿಕೊಂಡು ಅವರೊಂದಿಗೆ ಪೋಸ್ ನೀಡಲು ಪ್ರಾರಂಭಿಸಿದರು.