ಬಹುಭಾಷಾ ನಟ ಸೋನು ಸೂದ್ ಅವರು ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆಯಿಮದಲೂ ಸಾಕಷ್ಟು ಜನಪ್ರಿಯರಾಗಿದ್ದಾರೆ. ಕೋವಿಡ್ ಸಂದರ್ಭ ಪ್ರಾರಂಭವಾದ ಅವರ ಮಾನವೀಯ ಕಾರ್ಯಗಳು ಇಂದಿಗೂ ಮುಂದುವರೆದಿವೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರು ಅವರನ್ನು ಆರಾಧಿಸುತ್ತಾರೆ. ಇತ್ತೀಚೆಗೆ ನಟನನ್ನು ಅವರ ಕಟ್ಟಾ ಅಭಿಮಾನಿ ಭೇಟಿಯಾಗಿದ್ದಾರೆ. ತಮ್ಮ ಮೆಚ್ಚಿನ ವ್ಯಕ್ತಿಯನ್ನು ಭೇಟಿಯಾಗಲು ಅಭಿಮಾನಿ ಬರೋಬ್ಬರಿ 1,500 ಕಿಲೋ ಮೀಟರ್ ಓಡಿದ್ದಾರೆ. ಆ ಅಭಿಮಾನಿಯೊಂದಿಗೆ ಸೋನು ಸೂದ್ ಇರುವ ಫೋಟೋವೀಗ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಸೋನು ಸೂದ್ ಮತ್ತು ಅವರ ಅಭಿಮಾನಿ ಜೊತೆಗಿರುವ ಫೋಟೋಗಳನ್ನು ಪಾಪರಾಜಿಗಳು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಪ್ರಕಾರ, ಮಹೇಶ್ ಎಂಬ ಅಭಿಮಾನಿ ಸೋನು ಸೂದ್ ಅವರನ್ನು ಭೇಟಿ ಮಾಡಲು ರಾಷ್ಟ್ರ ರಾಜಧಾನಿ ದೆಹಲಿಯಿಂದ ಮುಂಬೈಗೆ ತೆರಳಿದ್ದಾರೆ. 1,500 ಕಿ.ಮೀ ಓಟದ ಮೂಲಕ ತಮ್ಮ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಆನ್ಲೈನ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಫೋಟೋದಲ್ಲಿ, ಜನಪ್ರಿಯ ನಟ ಸೋನು ಸೂದ್ ತಮ್ಮ ಈ ಅಭಿಮಾನಿಯೊಂದಿಗೆ ಪೋಸ್ ನೀಡಿರುವುದನ್ನು ಕಾಣಬಹುದು.
ಅಭಿಮಾನಿ ಬಿಳಿ ಟಿ-ಶರ್ಟ್, ಕಪ್ಪು ಕ್ಯಾಪ್ ಧರಿಸಿದ್ದಾರೆ. ಅದರ ಮೇಲೆ 'ಇಂಡಿಯಾ ಗೇಟ್ (ದೆಹಲಿ)ನಿಂದ ಗೇಟ್‌ವೇ ಆಫ್ ಇಂಡಿಯಾ (ಮುಂಬೈ)ವರೆಗೆ - 1500 ಕಿಲೋ ಮೀಟರ್'' ಎಂದು ಬರೆಯಲಾಗಿದೆ. ಸೋನು ಸೂದ್ ಫೋಟೋವಿದ್ದು, ನಿಜ ಜೀವನದ ನಾಯಕನಿಗೆ ನಮನ ಎಂದು ಕೂಡ ಬರೆಯಲಾಗಿದೆ. ಪಾಪರಾಜಿಗಳು ಎರಡು ಫೋಟೋ ಶೇರ್ ಮಾಡಿದ್ದು, ಒಂದು ಫೋಟೋದಲ್ಲಿ ಇಂಡಿಯಾ ಫ್ಲ್ಯಾಗ್ ಹಿಡಿದು ನಿಂತಿದ್ದಾರೆ. ಮತ್ತೊಂದರಲ್ಲಿ ನಟ ತಮ್ಮ ಅಭಿಮಾನಿಗೆ ಗಿಡವನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.