ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದ್ದ ಭೂ ಮಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಖಾಲಿ ಇರುವ 364 ಹುದ್ದೆಗಳಿಗೆ ಅಭ್ಯರ್ಥಿಗಳು ಮಾರ್ಚ್ 11ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಏಪ್ರಿಲ್ 10 ಆಗಿದೆ.
ಹುದ್ದೆ ವಿವರ:ಒಟ್ಟು 364 ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕಕ್ಕೆ 100 ಮತ್ತು ಉಳಿಕೆ ಮೂಲ ವೃಂದದಲ್ಲಿ 264 ಹುದ್ದೆಗಳ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿಇ ಅಥವಾ ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದೊಂದಿಗೆ ಪಿಯುಸಿ ವಿದ್ಯಾರ್ಹತೆ ಅಥವಾ ಲ್ಯಾಂಡ್ ಅಂಡ್ ಸಿಟಿ ಸರ್ವೆ ಪದವಿ ಪೂರ್ವ ಡಿಪ್ಲೊಮಾ ಅಥವಾ ಐಟಿಐ ಇನ್ ಸರ್ವೆ ಟ್ರೇಡ್ನಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3, ಪ. ಜಾ, ಪ. ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.