ಹೈದರಾಬಾದ್:ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಪ್ರವೇಶ ಪಡೆಯುವ ಬಾಲಕಿಯರ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಹೆಚ್ಚಳವಾಗಿದೆ. JEE ಅಡ್ವಾನ್ಸ್ಡ್-2024ರ ಜಂಟಿ ಅನುಷ್ಠಾನ ಸಮಿತಿಯ ಇತ್ತೀಚಿನ ವರದಿಯ ಪ್ರಕಾರ, 23 IIT ಗಳಲ್ಲಿ ಲಭ್ಯವಿರುವ 17,695 ಸೀಟುಗಳಲ್ಲಿ ಬರೋಬ್ಬರಿ 3,495 ಹುಡುಗಿಯರು ಪ್ರವೇಶ ಪಡೆದುಕೊಂಡಿದ್ದಾರೆ. ಇದು ಒಟ್ಟು ಪ್ರವೇಶದ ಶೇ 19.75ರಷ್ಟಾಗಿದೆ. ಕಳೆದ ವರ್ಷ ಶೇ 19.70 ರಷ್ಟು ವಿದ್ಯಾರ್ಥಿನಿಯರು ಐಐಟಿಗೆ ಪ್ರವೇಶ ಪಡೆದುಕೊಂಡಿದ್ದರು. ಈ ವರ್ಷ ಆ ಪ್ರಮಾಣ 0.5ರಷ್ಟು ಹೆಚ್ಚಳವಾದಂತಾಗಿದೆ.
ವರದಿಯ ಪ್ರಮುಖ ಅಂಶಗಳು:
- ಒಟ್ಟು ಸೀಟುಗಳು: ದೇಶದಲ್ಲಿ ಒಟ್ಟು 23 ಐಐಟಿಗಳು ಇದ್ದು, ಇದರಲ್ಲಿ 3,566 ಸೂಪರ್‌ನ್ಯೂಮರರಿ ಸೀಟುಗಳನ್ನು ಒಳಗೊಂಡಂತೆ 17,760 ಸೀಟುಗಳಿವೆ. ಇವುಗಳಲ್ಲಿ 17,695 ಭರ್ತಿಯಾಗಿದ್ದು, 3,495 ಸ್ಥಾನಗಳನ್ನು ಹುಡುಗಿಯರೇ ಆಕ್ರಮಿಸಿಕೊಂಡಿದ್ದಾರೆ.
- ಜೆಇಇ ಅಡ್ವಾನ್ಸ್ಡ್ ಭಾಗವಹಿಸುವಿಕೆ ಪ್ರಮಾಣ: ಜೆಇಇ ಅಡ್ವಾನ್ಸ್ಡ್-2024 ಗೆ ಅರ್ಹತೆ ಪಡೆದ 2,50,284 ಅಭ್ಯರ್ಥಿಗಳಲ್ಲಿ 1,80,200 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
- ಕೌನ್ಸೆಲಿಂಗ್ ಡೇಟಾ: ಜಂಟಿ ಸೀಟು ಹಂಚಿಕೆ ಪ್ರಾಧಿಕಾರ- JoSAA ಕೌನ್ಸೆಲಿಂಗ್‌ಗೆ ಅರ್ಹರಾಗಿರುವ 48,248 ಅಭ್ಯರ್ಥಿಗಳಲ್ಲಿ, 7,964 ಹುಡುಗಿಯರಿದ್ದಾರೆ. ಶೇಕಡಾವಾರು ಹೇಳುವುದಾದರೆ ಅವರ ಸಂಖ್ಯೆ ಒಟ್ಟು ಶೇ 16.50ರಷ್ಟಿದೆ. ಇದು ಕಳೆದ ವರ್ಷದ ಶೇ 17.22 (43,596 ರಲ್ಲಿ 7,509)ರಷ್ಟಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.