ಬೆಂಗಳೂರು:ಇಲ್ಲಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ 100 ಸೀಟುಗಳು ಲಭ್ಯವಿದೆ. ಅವುಗಳ ಹಂಚಿಕೆಗೆ ಸರ್ಕಾರವು ಆದೇಶಿಸಿರುವುದರಿಂದ, ಈ ಕಾಲೇಜಿಗೆ ಮಾತ್ರ ಅನ್ವಯವಾಗುವಂತೆ ಹೊಸದಾಗಿ ಆಪ್ಷನ್ಗಳನ್ನು ನಮೂದಿಸಲು ಅಕ್ಟೋಬರ್ 14ರ ರಾತ್ರಿ 11.59ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಮುಂಚೆ ಬೇರೆ ಕಾಲೇಜುಗಳಲ್ಲಿ ಸೀಟು ಪಡೆದವರು ಹಾಗೂ ಈವರೆಗೆ ಹಂಚಿಕೆಯಾಗದವರು ಆಪ್ಷನ್ ಎಂಟ್ರಿ ಮಾಡುವ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವರ್ಗವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿಗೆ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆಯಾದಲ್ಲಿ, ಅವರು ಮೊದಲಿನ ಸೀಟನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಈ ಹಿಂದಿನ ಸೀಟು ಪಡೆಯಲು ಸಾಧ್ಯ ಇರುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.