ನಾವು ನಿತ್ಯ ಬಹಳಷ್ಟು ದೃಶ್ಯಗಳನ್ನು ನೋಡುತ್ತೇವೆ ಮತ್ತು ಕೇಳುತ್ತೇವೆ. ಏನನ್ನಾದರೂ ಓದುತ್ತೇವೆ ಹಾಗೂ ಅನೇಕ ಜನರೊಂದಿಗೆ ಮಾತನಾಡುತ್ತೇವೆ. ಆದರೆ ಅವೆಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹೀಗೆ ಮರೆಯುವುದು ಸಹಜವೂ ಹೌದು. ಆದರೆ, ಓದುವ ವಿಷಯ ಬಂದಾಗ ಕೆಲವು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ತಾವು ಓದಿದ್ದನ್ನು ಚನ್ನಾಗಿ ನೆನಪಿನಲ್ಲಿ ಇಟ್ಟುಕೊಂಡು ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸುತ್ತಾರೆ.
ಆದರೆ, ಕೆಲವರು ಎಷ್ಟೇ ಕಷ್ಟಪಟ್ಟು ಓದಿದರೂ ಪರೀಕ್ಷೆಯ ಸಮಯದಲ್ಲಿ ಮರೆತು ಬಿಡುತ್ತಾರೆ. ಪರೀಕ್ಷೆಗಳನ್ನು ಸರಿಯಾಗಿ ಬರೆಯದಿದ್ದರೆ, ಅಂಕಗಳು ಬರದಿದ್ದರೆ ಆಗ ಅವರು ತೀವ್ರ ನಿರಾಸೆಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಜ್ಞಾಪಕಶಕ್ತಿಯನ್ನು ಹೇಗೆ ಸುಧಾರಿಸುವುದು? ಇದಕ್ಕಾಗಿ ತಜ್ಞರು ಸೂಚಿಸಿದ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ
ಕೆಲವು ನಿಯಮಗಳ ಅನುಸರಣೆ ಮುಖ್ಯ:ಮೆದುಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ ಜೀವನಶೈಲಿ ಸರಿಯಾಗಿರಬೇಕು. ಬೇಗ ಮಲಗಿ ಬೇಗ ಏಳಬೇಕು ಎಂಬ ನಿಯಮವನ್ನು ಅನುಸರಿಸಬೇಕು. ಬೆಳಗ್ಗೆ ಐದು ಗಂಟೆಗೆ ಏಳಬೇಕಾಗುತ್ತದೆ. ಇನ್ನು ಗುಣಮಟ್ಟದ ನಿದ್ರೆಯೂ ಅಷ್ಟೇ ಮುಖ್ಯವಾಗುತ್ತದೆ. ಸ್ಮರಣಶಕ್ತಿ ಹೆಚ್ಚಳ ಮತ್ತು ಮೆದುಳನ್ನ ಅತ್ಯಂತ ಸಮಾಧಾನಕರವಾಗಿ ಇಟ್ಟುಕೊಳ್ಳುವಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನೀವು ಸಾಕಷ್ಟು ನಿದ್ದೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಸಕ್ರಿಯ ಆಲಿಸುವಿಕೆ ಅಭ್ಯಾಸ ಮಾಡಿಕೊಳ್ಳಿ:ಸಕ್ರಿಯ ಆಲಿಸುವಿಕೆಯನ್ನು ಅಭ್ಯಾಸ ಮಾಡಬೇಕು. ನೋಡುವ ಮತ್ತು ಓದುವ ಬದಲು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಓದಿದ/ಕೇಳಿದ ಮಾಹಿತಿಯನ್ನು ವಿಶ್ಲೇಷಿಸಿ, ನೀವೇ ಪ್ರಶ್ನೆಗಳನ್ನು ಕೇಳಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಮುಖ್ಯ ಅಂಶಗಳನ್ನು ಮನನ ಮಾಡಿಕೊಳ್ಳಬೇಕು ಮತ್ತು ಬರೆದಿಟ್ಟುಕೊಳ್ಳಬೇಕು. ಓದಿದ್ದನ್ನು ಸಂಕ್ಷಿಪ್ತಗೊಳಿಸುವುದನ್ನು ಮರೆಯಬಾರದು ಮತ್ತು ಅದು ಮರೆಯದಂತೆ ಮಾಡಲು ಬರೆದಿಟ್ಟುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.