ನವದೆಹಲಿ:ದೇಶದಲ್ಲಿ ಈಗ 15 ವರ್ಷಕ್ಕಿಂತ ಹಳೆಯದಾದ 1.1 ದಶಲಕ್ಷಕ್ಕಿಂತಲೂ (11 ಲಕ್ಷ) ಹೆಚ್ಚು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳಿರುವುದರಿಂದ ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿಯು ವ್ಯಾಪಕ ಮಹತ್ವ ಪಡೆದುಕೊಂಡಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.
ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಮತ್ತೆ 5.7 ಲಕ್ಷ ವಾಹನಗಳು 15 ವರ್ಷಗಳ ವಯಸ್ಸಿನ ಮಿತಿಯನ್ನು ದಾಟಲಿವೆ ಎಂದು ರೇಟಿಂಗ್ ಏಜೆನ್ಸಿ ಐಸಿಆರ್ಎ ಅಂದಾಜಿಸಿದೆ.
ಈ ವಾಹನಗಳ ಪೈಕಿ ಒಂದು ಸಣ್ಣ ಪ್ರಮಾಣವನ್ನು ಗುಜರಿಗೆ ಹಾಕಿದರೂ ಸಾಕು ಹೊಸ ವಾಹನಗಳ ಮಾರುಕಟ್ಟೆ ಚೇತರಿಸಿಕೊಳ್ಳಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಗುಜರಿ ನೀತಿಯ ಅಡಿಯಲ್ಲಿ ಮೊದಲ ಹಂತದಲ್ಲಿ 9 ಲಕ್ಷಕ್ಕೂ ಹೆಚ್ಚು ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡಲು ಪ್ರಸ್ತಾಪಿಸಲಾಗಿದ್ದು, ಇದು ವಾಹನ ಉದ್ಯಮದಲ್ಲಿ ಗಮನಾರ್ಹ ಬೇಡಿಕೆಯನ್ನು ಸೃಷ್ಟಿಸಲಿದೆ.
ವರದಿಯ ಪ್ರಕಾರ, 15 ವರ್ಷಗಳನ್ನು ಮೀರಿದ ದ್ವಿಚಕ್ರ ವಾಹನಗಳು, ಪ್ರಯಾಣಿಕರ ವಾಹನಗಳು ಮತ್ತು ಲಘು ವಾಣಿಜ್ಯ ವಾಹನಗಳ (ಎಲ್ಸಿವಿ) ಬಳಕೆ ಸೀಮಿತವಾಗಿರುವುದರಿಂದ ಇವುಗಳ ಗುಜರಿ ಪ್ರಮಾಣ ಕಡಿಮೆಯಾಗಿರಲಿದೆ. ಆಗಸ್ಟ್ 31 ರವರೆಗೆ, ನೋಂದಾಯಿತ ವಾಹನ ಗುಜರಿ ಕೇಂದ್ರಗಳಿಗೆ (ಆರ್ವಿಎಸ್ಎಫ್ಗಳು) ಕೇವಲ 44,803 ಖಾಸಗಿ ಸ್ಕ್ರ್ಯಾಪ್ ಅರ್ಜಿಗಳು ಮತ್ತು 41,432 ಸರ್ಕಾರಿ ಸ್ಕ್ರ್ಯಾಪ್ ಅರ್ಜಿಗಳು (ರಕ್ಷಣಾ / ಮುಟ್ಟುಗೋಲು ಸ್ಕ್ರ್ಯಾಪ್ ಅರ್ಜಿಗಳು ಸೇರಿದಂತೆ) ಸಲ್ಲಿಕೆಯಾಗಿವೆ.