ಕರ್ನಾಟಕ

karnataka

ಷೇರು ಮಾರುಕಟ್ಟೆ ಅಲ್ಪ ಕುಸಿತ: ಅದಾನಿ ಗ್ರೂಪ್​​ನ 8 ಷೇರು ಇಳಿಕೆ, 2 ಏರಿಕೆ - Stock Market Today

By ETV Bharat Karnataka Team

Published : Aug 12, 2024, 5:26 PM IST

ಹಿಂಡೆನ್​ಬರ್ಗ್​ ಸಂಸ್ಥೆಯ ವರದಿಯ ಹಿನ್ನೆಲೆಯಲ್ಲಿ ಇಂದು ಏರಿಳಿತದೊಂದಿಗೆ ವಹಿವಾಟು ನಡೆಸಿದ ಭಾರತೀಯ ಷೇರು ಮಾರುಕಟ್ಟೆ ಅಲ್ಪ ಇಳಿಕೆಯೊಂದಿಗೆ ಕೊನೆಗೊಂಡಿದೆ.

ಮುಂಬೈ ಸ್ಟಾಕ್​ ಎಕ್ಸ್​​ಚೇಂಜ್
ಮುಂಬೈ ಸ್ಟಾಕ್​ ಎಕ್ಸ್​​ಚೇಂಜ್ (IANS)

ಮುಂಬೈ: ಬರ್ಮುಡಾ ಮತ್ತು ಮಾರಿಷಸ್​ನ ಗೊತ್ತಾಗದ ಕೆಲವೊಂದು ಫಂಡ್​ಗಳಲ್ಲಿ ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಗುಪ್ತವಾಗಿ ಹೂಡಿಕೆ ಮಾಡಿದ್ದಾರೆ ಎಂದು ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ಸಂಶೋಧನಾ ವರದಿಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದ್ದರಿಂದ ಷೇರು ಮಾರುಕಟ್ಟೆಗಳು ಸೋಮವಾರ ಸಾಕಷ್ಟು ಏರಿಳಿತಗಳ ನಂತರ ಅಲ್ಪ ಕುಸಿತದೊಂದಿಗೆ ಕೊನೆಗೊಂಡವು.

ಆರಂಭಿಕ ಕುಸಿತದಿಂದ ಚೇತರಿಸಿಕೊಂಡ 30 ಷೇರುಗಳ ಸೆನ್ಸೆಕ್ಸ್ 56.99 ಪಾಯಿಂಟ್ ಅಥವಾ ಶೇಕಡಾ 0.07ರಷ್ಟು ಕುಸಿದು 79,648.92ರಲ್ಲಿ ಕೊನೆಗೊಂಡಿದೆ. ಬೆಳಗಿನ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್​ 479.78 ಪಾಯಿಂಟ್ ಅಥವಾ ಶೇಕಡಾ 0.60ರಷ್ಟು ಕುಸಿದು 79,226.13ಕ್ಕೆ ತಲುಪಿತ್ತು. ನಂತರ ಇದು 400.27 ಪಾಯಿಂಟ್ ಅಥವಾ ಶೇಕಡಾ 0.50ರಷ್ಟು ಏರಿಕೆ ಕಂಡು 80,106.18ಕ್ಕೆ ತಲುಪಿತ್ತು. ಆದರೆ ಕೊನೆಯಲ್ಲಿ ಬಿಎಸ್ಇ ಸೂಚ್ಯಂಕ ಇಳಿಕೆಯೊಂದಿಗೆ ಕೊನೆಗೊಂಡಿತು.

ಎನ್ಎಸ್ಇ ನಿಫ್ಟಿ 20.50 ಪಾಯಿಂಟ್ಸ್ ಅಥವಾ ಶೇಕಡಾ 0.08ರಷ್ಟು ಕುಸಿದು 24,347ರಲ್ಲಿ ಕೊನೆಗೊಂಡಿದೆ. ಇಂಟ್ರಾ-ಡೇನಲ್ಲಿ ಇದು ಕನಿಷ್ಠ 24,212.10 ಮತ್ತು ಗರಿಷ್ಠ 24,472.80ರ ಮಧ್ಯೆ ವಹಿವಾಟು ನಡೆಸಿತು.

ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ ಅದಾನಿ ಪೋರ್ಟ್ಸ್, ಎನ್​ಟಿಪಿಸಿ, ಪವರ್ ಗ್ರಿಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನೆಸ್ಲೆ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಷ್ಟ ಅನುಭವಿಸಿದವು. ಆ್ಯಕ್ಸಿಸ್ ಬ್ಯಾಂಕ್, ಇನ್ಫೋಸಿಸ್, ಜೆಎಸ್​ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಲಾಭ ಗಳಿಸಿದವು.

ಆರಂಭಿಕ ವಹಿವಾಟಿನಲ್ಲಿ ಅದಾನಿ ಗ್ರೂಪ್​​ನ ಎಲ್ಲಾ 10 ಷೇರುಗಳು ತೀವ್ರವಾಗಿ ಕುಸಿದವು. ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡಾ 17 ಮತ್ತು ಅದಾನಿ ಟೋಟಲ್ ಗ್ಯಾಸ್ ಶೇಕಡಾ 13.39ರಷ್ಟು ಕುಸಿದಿವೆ. ಕೊನೆಯಲ್ಲಿ ಗ್ರೂಪ್​ನ ಎಂಟು ಕಂಪನಿಯ ಷೇರುಗಳು ಕೆಳಮಟ್ಟದಲ್ಲಿ ಕೊನೆಗೊಂಡರೆ, ಅವುಗಳಲ್ಲಿ ಎರಡು ಮತ್ತೆ ಪುಟಿದೆದ್ದವು.

ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್​ನ ಕಡಲಾಚೆಯ ನಿಧಿಗಳಲ್ಲಿ ಬಹಿರಂಗಪಡಿಸದ ಹೂಡಿಕೆಗಳನ್ನು ಮಾಡಿದ್ದಾರೆ ಎಂದು ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆಯು ಶನಿವಾರ ಆರೋಪಿಸಿದೆ. ತಮ್ಮ ಹಣವನ್ನು ತಿರುಗಿಸಲು ಮತ್ತು ಆ ಮೂಲಕ ಸ್ಟಾಕ್ ಬೆಲೆಗಳನ್ನು ಹೆಚ್ಚಿಸಲು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಹಿರಿಯ ಸಹೋದರ ವಿನೋದ್ ಅದಾನಿ ಅವರು ಇದೇ ಸಂಸ್ಥೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್ ಮತ್ತು ಹಾಂಗ್ ಕಾಂಗ್ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಇಳಿಕೆಯೊಂದಿಗೆ ಕೊನೆಗೊಂಡಿದೆ. ಟೋಕಿಯೊ ಮತ್ತು ಬ್ಯಾಂಕಾಕ್ ನ ಮಾರುಕಟ್ಟೆಗಳಿಗೆ ರಜೆ ಇದೆ. ಯುರೋಪಿಯನ್ ಮಾರುಕಟ್ಟೆಗಳು ಹೆಚ್ಚಾಗಿ ಏರಿಕೆಯಲ್ಲಿ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಶುಕ್ರವಾರ ಏರಿಕೆ ಕಂಡವು.

ಇದನ್ನೂ ಓದಿ: ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್​ - Indian Food in Karachi

ABOUT THE AUTHOR

...view details