ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ಮುಂದುವರಿದ ಕುಸಿತ, ಇಂದು 6 ಲಕ್ಷ ಕೋಟಿ ಭಾರಿ ನಷ್ಟ: ಸೆನ್ಸೆಕ್ಸ್​ 984, ನಿಫ್ಟಿ 324 ಅಂಕಗಳ ಕುಸಿತ - STOCK MARKET

ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 980 ಕ್ಕೂ ಅಧಿಕ ಪಾಯಿಂಟ್ಸ್​ ಇಳಿಕೆಯಾಗಿದೆ.

6 ಲಕ್ಷ ಕೋಟಿ ನಷ್ಟ: ಸೆನ್ಸೆಕ್ಸ್​ 984 & ನಿಫ್ಟಿ 324 ಅಂಕ ಕುಸಿತ
6 ಲಕ್ಷ ಕೋಟಿ ನಷ್ಟ: ಸೆನ್ಸೆಕ್ಸ್​ 984 & ನಿಫ್ಟಿ 324 ಅಂಕ ಕುಸಿತ (IANS)

By ETV Bharat Karnataka Team

Published : Nov 13, 2024, 4:44 PM IST

ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಇಂದು ಬೆಳಗ್ಗೆ ಇಳಿಕೆಯೊಂದಿಗೆ ಪ್ರಾರಂಭವಾಗಿ, ಅದೇ ಪ್ರವೃತ್ತಿಯಲ್ಲಿ ಮುಂದುವರಿದು ಕುಸಿತದೊಂದಿಗೆ ದಿನವನ್ನು ಕೊನೆಗೊಳಿಸಿದವು. ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಬುಧವಾರ ತಲಾ ಶೇಕಡಾ 1 ಕ್ಕಿಂತ ಕಡಿಮೆಯಾಗಿವೆ.

ಕುಸಿತದ ನುಡವೆ ಕೆಲ ಷೇರುಗಳಲ್ಲಿ ಲಾಭ:ಬಿಎಸ್​ಇ ಸೆನ್ಸೆಕ್ಸ್ 984.23 ಪಾಯಿಂಟ್ ಅಥವಾ ಶೇಕಡಾ 1.25 ರಷ್ಟು ಕುಸಿದು 77,690.95 ರಲ್ಲಿ ಕೊನೆಗೊಂಡಿತು ಮತ್ತು ನಿಫ್ಟಿ 50 324.40 ಪಾಯಿಂಟ್ ಅಥವಾ ಶೇಕಡಾ 1.36 ರಷ್ಟು ಕುಸಿದು 23,559.05 ರಲ್ಲಿ ಕೊನೆಗೊಂಡಿತು. ಎನ್​​ಟಿಪಿಸಿ, ಎಚ್​ಯುಎಲ್ ಮತ್ತು ಟಾಟಾ ಮೋಟಾರ್ಸ್ ಇಂದು ಹೆಚ್ಚಿನ ಲಾಭ ಗಳಿಸಿದವು. ಮತ್ತೊಂದೆಡೆ, ಹಿಂಡಾಲ್ಕೊ, ಎಂ & ಎಂ ಮತ್ತು ಐಷರ್ ಮೋಟಾರ್ಸ್ ಹೆಚ್ಚು ನಷ್ಟ ಅನುಭವಿಸಿದವು.

141 ಷೇರುಗಳಲ್ಲಿ 52 ವಾರಗಳ ಗರಿಷ್ಠ ಮಟ್ಟ:ಬ್ಯಾಂಕ್ ನಿಫ್ಟಿ ಕೂಡ ಇಂದು ಶೇ 0.88 ರಷ್ಟು ಮತ್ತು ನಿಫ್ಟಿ ಹಣಕಾಸು ಸೇವೆಗಳ ಸೂಚ್ಯಂಕ ಶೇ 0.72 ರಷ್ಟು ಕುಸಿತ ಕಂಡಿವೆ. ಈ ಕುಸಿತದ ಹೊರತಾಗಿಯೂ, 141 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ವಿಶಾಲ ಮಾರುಕಟ್ಟೆಗಳು ದಿನವನ್ನು ನಕಾರಾತ್ಮಕವಾಗಿ ಕೊನೆಗೊಳಿಸಿದವು. ಬಿಎಸ್ಇ ಮಿಡ್ ಕ್ಯಾಪ್ ಶೇಕಡಾ 2.6 ರಷ್ಟು ಕುಸಿದರೆ, ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 3.1 ರಷ್ಟು ಕುಸಿದಿದೆ.

ಮುಂದುವರಿದ ವಿದೇಶಿ ಹೂಡಿಕೆದಾರರ ಮಾರಾಟ ಪ್ರವೃತ್ತಿ:ವಿದೇಶಿ ಹೂಡಿಕೆದಾರರು 3,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಹೂಡಿಕೆದಾರರು 1,854 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ಅಮೆರಿಕದ ಹಣದುಬ್ಬರದ ಅಂಕಿ - ಅಂಶಗಳ ಪ್ರಕಟಣೆಗೆ ಮುಂಚೆ ಟ್ರೇಡಿಂಗ್ ಜಾಗರೂಕವಾಗಿರುವುದರಿಂದ ಚಿನ್ನದ ಬೆಲೆಗಳು ಕುಸಿದಿವೆ ಮತ್ತು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್​ಗೆ 72.09 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಎಂಸಿಎಕ್ಸ್​ನಲ್ಲಿ ಇತ್ತೀಚಿನ ಕಾಂಟ್ರ್ಯಾಕ್ಟ್ ಚಿನ್ನದ ಬೆಲೆ 10 ಗ್ರಾಂಗೆ ಶೇ 0.2ರಷ್ಟು ಏರಿಕೆಯಾಗಿ 75,077 ರೂ. ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಶೇ 0.9ರಷ್ಟು ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿ ದರ 90,087 ರೂ.ಗೆ ತಲುಪಿದೆ.

ಬುಧವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಕುಸಿದು 84.40 ಕ್ಕೆ ತಲುಪಿದೆ. ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ಬಲವಾದ ಡಾಲರ್ ಸ್ಥಳೀಯ ಕರೆನ್ಸಿಯ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ : ಸೆಪ್ಟೆಂಬರ್​ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ 3.1ರಷ್ಟು ಹೆಚ್ಚಳ

For All Latest Updates

ABOUT THE AUTHOR

...view details