ಮುಂಬೈ: ಸತತ ಹನ್ನೊಂದನೇ ದಿನವೂ ಓಟವನ್ನು ಮುಂದುವರಿಸಿದ ಭಾರತೀಯ ಷೇರು ಮಾರುಕಟ್ಟೆ ಸತತ ಎರಡನೇ ದಿನ ಹೊಸ ಎತ್ತರವನ್ನು ತಲುಪಿ, ಏರಿಕೆಯಲ್ಲಿಯೇ ಕೊನೆಗೊಂಡವು. ಗುರುವಾರದಂದು ಸೆನ್ಸೆಕ್ಸ್ 349 ಪಾಯಿಂಟ್ಸ್ ಏರಿಕೆಯಾಗಿ 82,134 ರಲ್ಲಿ ಕೊನೆಗೊಂಡಿದೆ ಮತ್ತು ನಿಫ್ಟಿ 99.60 ಪಾಯಿಂಟ್ಸ್ ಏರಿಕೆಯಾಗಿ 25,152 ರಲ್ಲಿ ಕೊನೆಗೊಂಡಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 82,000 ಅಂಕಗಳ ಗಡಿ ದಾಟಿದೆ. ನಿಫ್ಟಿ ಸೂಚ್ಯಂಕವು ಸತತ ನಾಲ್ಕನೇ ವಹಿವಾಟಿನಲ್ಲಿ 25,000 ಕ್ಕಿಂತ ಹೆಚ್ಚಾಗಿದೆ.
ವಲಯವಾರು ಮಾರುಕಟ್ಟೆಯು ಮಿಶ್ರವಾಗಿದ್ದರೂ ಐಟಿ, ಎಫ್ ಎಂಸಿಜಿ, ಗ್ರಾಹಕ ಬಾಳಿಕೆ ಬರುವ ಸರಕು, ತೈಲ ಮತ್ತು ಅನಿಲ ಸೂಚ್ಯಂಕಗಳಲ್ಲಿನ ಲಾಭದಿಂದಾಗಿ ಮುಖ್ಯ ಸೂಚ್ಯಂಕಗಳು ಇಂದು ಸಾರ್ವಕಾಲಿಕ ಹೊಸ ಎತ್ತರಕ್ಕೆ ತಲುಪಿವೆ.
ಲಾಭ ನಷ್ಟಕ್ಕೀಡಾದ ಪ್ರಮುಖ ಷೇರುಗಳು: ನಿಫ್ಟಿಯಲ್ಲಿ ಬಜಾಜ್ ಟ್ವಿನ್ಸ್, ಬ್ರಿಟಾನಿಯಾ, ಐಟಿಸಿ ಮತ್ತು ಅಪೊಲೊ ಆಸ್ಪತ್ರೆ ಷೇರುಗಳು ಲಾಭ ಗಳಿಸಿದರೆ ಗ್ರಾಸಿಮ್ ಇಂಡಸ್ಟ್ರೀಸ್, ಎಂ & ಎಂ, ಐಷರ್ ಮೋಟಾರ್ಸ್, ಹಿಂಡಾಲ್ಕೊ ಮತ್ತು ಅದಾನಿ ಎಂಟರ್ ಪ್ರೈಸಸ್ ನಷ್ಟಕ್ಕೀಡಾದವು.
297 ಷೇರುಗಳು ಇಂದು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಮತ್ತೊಂದೆಡೆ, ಬಿಎಸ್ಇಯಲ್ಲಿ 23 ಷೇರುಗಳು ತಮ್ಮ 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದವು. ಆದಾಗ್ಯೂ, ವಹಿವಾಟು ನಡೆಸಿದ 4,047 ಷೇರುಗಳ ಪೈಕಿ 1420 ಷೇರುಗಳು ಮೇಲ್ಮಟ್ಟದಲ್ಲಿ ಕೊನೆಗೊಂಡವು. ಸುಮಾರು 2531 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು ಮತ್ತು 96 ಷೇರುಗಳು ಬದಲಾಗದೆ ಉಳಿದವು.