ಸತ್ಯ ನಾಡೆಲ್ಲಾ ಇದು ವಿಶ್ವಕ್ಕೆ ಚಿರಪರಿಚಿತ ಹೆಸರು. ಭಾರತದಲ್ಲಿ ಹುಟ್ಟಿ ಬೆಳೆದ ಅವರು ಈಗ ಜಾಗತಿಕ ದೈತ್ಯ ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ. ವಿಶ್ವದಲ್ಲೇ ಅತ್ಯಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್ ಪ್ರಸ್ತುತ ಸತ್ಯ ಅವರ ನಾಯಕತ್ವದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಸತ್ಯ ನಾಡೆಲ್ಲಾ ಇತ್ತೀಚೆಗೆ ಮೈಕ್ರೋಸಾಫ್ಟ್ ಸಿಇಒ ಆಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಮೈಕ್ರೋಸಾಫ್ಟ್ ಅನ್ನು ಅವರು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೆ ಸತ್ಯ ನಾಡೆಲ್ಲಾ ಅವರ ಯಶಸ್ಸಿನ ಹಿಂದೆ ಹಲವು ಕಾರಣಗಳಿವೆ. ಅವರೇ ಹಲವು ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
'ಹೆಚ್ಚು ಆಲಿಸಿ - ಕಡಿಮೆ ಮಾತನಾಡಿ'ನಾವು ಯಾವುದೇ ಕೆಲಸದಲ್ಲಿ ಉತ್ಕೃಷ್ಟರಾಗಲು ಬಯಸುತ್ತೇವೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ 2015 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ಸಮಯ ಬಂದಾಗ 'ನಿರ್ಣಾಯಕವಾಗಿರಿ' ಎಂದು ಸಲಹೆ ನೀಡಿದ್ದಾರೆ. ನಿಮಗೆ ಬೇಕಾದುದನ್ನು ಮಾಡಲು ನೀವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಸತ್ಯ ಅವರ ವಿಶ್ವಾಸದ ಹಾಗೂ ಖಚಿತ ಸಲಹೆಯಾಗಿದೆ.
'ಸಣ್ಣ ಸಣ್ಣ ವಿಷಯಗಳೂ ಯಾವಾಗಲೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಆದಾಗ್ಯೂ, ಅವುಗಳನ್ನು ನಮ್ಮ ನಿಯಂತ್ರಣದಲ್ಲಿಡಲು ನಾವು ಸಾಕಷ್ಟು ಶ್ರಮ ಹಾಕಬೇಕಾಗುವುದು ಅಗತ್ಯವಾಗಿದೆ‘ ಎಂದು ಸತ್ಯ ನಾಡೆಲ್ಲಾ 2019 ರಲ್ಲಿ ಚಿಕಾಗೋ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಪ್ರತಿಯೊಬ್ಬ ಉದ್ಯೋಗಿಯು ಎಲ್ಲ ವಿಷಯಗಳಲ್ಲಿ ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬೇಕು. ಕೌಶಲಗಳನ್ನು ಹೆಚ್ಚಿಸಿಕೊಂಡರೆ ಅವರ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ಸತ್ಯ ನಾಡೆಲ್ಲಾ ಅವರ ಖಚಿತ ಮಾತಾಗಿದೆ.
ನಾಯಕತ್ವ ಎನ್ನುವುದು ಸವಲತ್ತು ಅಲ್ಲ, ನೌಕರರ ಪರಿಕಲ್ಪನೆಗಳು, ಆಲೋಚನೆಗಳು ಮತ್ತು ಸಮಸ್ಯೆಗಳನ್ನು ಸಂಸ್ಥೆಯ ಮುಖಂಡರು ತಿಳಿದುಕೊಳ್ಳಬೇಕಾಗಿರುವುದು ತೀರಾ ಅಗತ್ಯಗಳಲ್ಲಿ ಒಂದು ಸತ್ಯ ನಾಡೆಲ್ಲಾ ಪ್ರತಿಪಾದಿಸಿದ್ದಾರೆ. ಸಂಸ್ಥೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಿಮ್ಮ ಉದ್ಯೋಗಿಗಳನ್ನು ನೀವು ನಂಬಿದರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದರು.