ಕರ್ನಾಟಕ

karnataka

ETV Bharat / business

51 ಸಾವಿರ ವಿದ್ಯಾರ್ಥಿಗಳ 17 ಕೋಟಿ ರೂ. ಶುಲ್ಕ ಮನ್ನಾ ಮಾಡಿದ ಫಿಸಿಕ್ಸ್​ ವಾಲಾ - ಫಿಸಿಕ್ಸ್​ ವಾಲಾ

ಶಿಕ್ಷಣ-ತಂತ್ರಜ್ಞಾನ ಕಂಪನಿ ಫಿಸಿಕ್ಸ್​ ವಾಲಾ ತನ್ನ 51 ಸಾವಿರ ವಿದ್ಯಾರ್ಥಿಗಳ ಫೀ ಮನ್ನಾ ಮಾಡಿದೆ.

Physics Wallah Founder Waives-off Fee Worth 17 Cr for 51,000 Student
Physics Wallah Founder Waives-off Fee Worth 17 Cr for 51,000 Student

By ETV Bharat Karnataka Team

Published : Feb 13, 2024, 2:31 PM IST

ನವದೆಹಲಿ:ಎಜ್ಯುಟೆಕ್ ಕಂಪನಿ ಫಿಸಿಕ್ಸ್​ ವಾಲಾ 51 ಸಾವಿರ ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡಿದೆ. ಕಂಪನಿಯ ಸಂಸ್ಥಾಪಕ ಅಲಖ್ ಪಾಂಡೆ 2023-24ರ ಶೈಕ್ಷಣಿಕ ವರ್ಷದಲ್ಲಿ 51 ಸಾವಿರ ಬಡ ವಿದ್ಯಾರ್ಥಿಗಳ ಶುಲ್ಕ ಮನ್ನಾ ನಿರ್ಧಾರ ಕೈಗೊಂಡಿದ್ದಾರೆ ಎಂದು ಫಿಸಿಕ್ಸ್​ ವಾಲಾ ಸೋಮವಾರ ತಿಳಿಸಿದೆ. ಕಂಪನಿಯ ಶಿಕ್ಷಣ ಹಕ್ಕು ಕಾರ್ಯಕ್ರಮದ (Right to Education programme) ಅಡಿ ನೀಟ್, ಜೆಇಇ, ವಾಣಿಜ್ಯ, ಕಲೆ ಮತ್ತು 9-12 ನೇ ತರಗತಿ ಕೋಚಿಂಗ್ ಸೇರಿದಂತೆ ವಿವಿಧ ಕೋರ್ಸ್​ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಫಿಸಿಕ್ಸ್​ ವಾಲಾ ಸಂಸ್ಥಾಪಕ ಮತ್ತು ಸಿಇಒ ಅಲಖ್ ಪಾಂಡೆ ಅವರು 2023-2024ರ ಶೈಕ್ಷಣಿಕ ವರ್ಷದಲ್ಲಿ 51 ಸಾವಿರ ಪೇಡ್​ ಬ್ಯಾಚ್​ನ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಮನ್ನಾ ಮಾಡಿದ್ದಾರೆ. ಮನ್ನಾ ಮಾಡಲಾದ ಶುಲ್ಕದ ಒಟ್ಟು ಮೊತ್ತ 17 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ನಾವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ನಾವು ಅವರೊಂದಿಗೆ ಜೊತೆಯಾಗಿ ನಿಲ್ಲುವ ಭರವಸೆ ನೀಡುತ್ತೇವೆ. ಹಣಕಾಸಿನ ಸಮಸ್ಯೆ ಅವರ ಶೈಕ್ಷಣಿಕ ಜೀವನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ" ಎಂದು ಪಾಂಡೆ ಹೇಳಿದರು.

ಶಾಲೆ ಆರಂಭಿಸಿದ ಫಿಸಿಕ್ಸ್​ವಾಲಾ: ಅಲಖ್ ಪಾಂಡೆ ನೇತೃತ್ವದ ಎಜ್ಯುಟೆಕ್ ಯುನಿಕಾರ್ನ್ ಫಿಸಿಕ್ಸ್ ವಾಲಾ (ಪಿಡಬ್ಲ್ಯೂ) ಪಿಡಬ್ಲ್ಯೂ ಗುರುಕುಲಂ ಶಾಲೆಯನ್ನು ಪ್ರಾರಂಭಿಸುವ ಮೂಲಕ ಪ್ರಾಥಮಿಕ ತರಗತಿಗಳ ಆಫ್​ಲೈನ್ ಶಿಕ್ಷಣಕ್ಕೆ ಕಾಲಿಟ್ಟಿದೆ. ಗುರುಗ್ರಾಮದಲ್ಲಿರುವ ಈ ಶಾಲೆಯಲ್ಲಿ ಪ್ಲೇ ಸ್ಕೂಲ್ ನಿಂದ ಏಳನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ನೀಡಲಾಗುವುದು.

ಶಾಲೆಯ ಮೊದಲ ಬ್ಯಾಚ್​ಗೆ ಈಗಾಗಲೇ 400 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಇದರ ಪಠ್ಯಕ್ರಮವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಗೆ ಸಂಯೋಜಿಸಲಾಗುವುದು ಎಂದು ಪಿಡಬ್ಲ್ಯೂ ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ: ಫಿಸಿಕ್ಸ್ ವಾಲಾ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯೊಂದಿಗೆ ಕೂಡ ಶೈಕ್ಷಣಿಕ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಇದರ ಅಡಿಯಲ್ಲಿ 4,300 ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಕಂಪನಿ ತರಬೇತಿ ನೀಡಲಿದೆ. ಈ ಸಹಯೋಗದ ಅಡಿಯಲ್ಲಿ ಫಿಸಿಕ್ಸ್ ವಾಲಾ ರಾಜ್ಯಾದ್ಯಂತ 84 ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಸೌಲಭ್ಯಗಳು ಮತ್ತು ಕಸ್ಟಮೈಸ್ ಮಾಡಿದ ಬ್ಯಾಚ್​ಗಳನ್ನು ಆರಂಭಿಸಲಿದ್ದು, ಸಂದೇಹಗಳನ್ನು ಪರಿಹರಿಸಲು ಮತ್ತು ತರಗತಿಯಲ್ಲಿನ ಸಹಾಯಕ್ಕಾಗಿ ಸರ್ಕಾರಿ ಶಿಕ್ಷಕರ ಬೆಂಬಲದೊಂದಿಗೆ ಆನ್​ಲೈನ್ ತರಗತಿಗಳನ್ನು ನಡೆಸಲಿದೆ.

ಇದನ್ನೂ ಓದಿ : ಕಾರಣವಿಲ್ಲದಿದ್ದರೂ ಸ್ಮಾರ್ಟ್​ಫೋನ್ ಕೈಗೆತ್ತಿಕೊಳ್ಳುವ ಅಭ್ಯಾಸ ನಿಮಗಿದೆಯಾ; ಇದಕ್ಕೆ ತಜ್ಞರು ಹೇಳುವುದೇನು ಗೊತ್ತೇ?

ABOUT THE AUTHOR

...view details