ನವದೆಹಲಿ: ಭಾರತದ ಸಾಂಬಾರು ಪದಾರ್ಥಗಳು ಮತ್ತು ಸಾಂಬಾರು ಉತ್ಪನ್ನಗಳ ರಫ್ತು 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 4.46 ಬಿಲಿಯನ್ ಡಾಲರ್ನಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಮೆಣಸು, ಏಲಕ್ಕಿ ಮತ್ತು ಅರಿಶಿನದಂತಹ ಕೆಲ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದರಿಂದ ಮತ್ತು ಪ್ರಮಾಣ ಹೆಚ್ಚಾಗಿದ್ದರಿಂದ ಈ ಬೆಳವಣಿಗೆ ಕಂಡುಬಂದಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಮಸಾಲೆ ಮಂಡಳಿಯು ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ದೇಶದಿಂದ 36,958.80 ಕೋಟಿ ರೂ.ಗಳ (4.46 ಬಿಲಿಯನ್ ಡಾಲರ್) ಮೌಲ್ಯದ 15,39,692 ಟನ್ಗಳಷ್ಟು ಸಾಂಬಾರು ಪದಾರ್ಥಗಳು ಮತ್ತು ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.
ಚೀನಾ ಮತ್ತು ಬಾಂಗ್ಲಾದೇಶದಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಕೆಂಪು ಮೆಣಸಿನಕಾಯಿ ರಫ್ತು 2024 ರ ಹಣಕಾಸು ವರ್ಷದಲ್ಲಿ ದಾಖಲೆಯ 1.5 ಬಿಲಿಯನ್ ಡಾಲರ್ಗೆ ತಲುಪಿದೆ. ಇದು ಹಿಂದಿನ ವರ್ಷದ 1.3 ಬಿಲಿಯನ್ ಡಾಲರ್ಗಿಂತ ಶೇಕಡಾ 15 ರಷ್ಟು ಹೆಚ್ಚಾಗಿದೆ.
ಸಾಂಬಾರು ಪದಾರ್ಥಗಳ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ಕೆಂಪು ಮೆಣಸಿನಕಾಯಿ ರಫ್ತು ಪ್ರಮಾಣವು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿ ಹಿಂದಿನ ವರ್ಷ ಇದ್ದ 5.24 ಲಕ್ಷ ಟನ್ಗಳಿಂದ 6.01 ಲಕ್ಷ ಟನ್ಗಳಿಗೆ ತಲುಪಿದೆ. 1.5 ಬಿಲಿಯನ್ ಡಾಲರ್ ಮೌಲ್ಯದ ಕೆಂಪು ಮೆಣಸಿನಕಾಯಿಯನ್ನು ರಫ್ತು ಮಾಡಲಾಗಿದ್ದು, ಇದು ಭಾರತದ ಒಟ್ಟು ಸಾಂಬಾರು ಪದಾರ್ಥಗಳ ರಫ್ತಿನ ಶೇಕಡಾ 34 ರಷ್ಟಿದೆ.