ಮುಂಬೈ:ಕೇಂದ್ರ ಸರ್ಕಾರದಿಂದ ರೈತರಿಗೆ ನೀಡಲಾಗುವ ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ಮತ್ತು ಯುಪಿಐ ಮೂಲಕ ಪೂರ್ವ-ಮಂಜೂರಾದ ಸಾಲಗಳನ್ನು ನೀಡಲು ಸಣ್ಣ ಹಣಕಾಸು ಬ್ಯಾಂಕುಗಳಿಗೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿರ್ಧರಿಸಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲದ ನೆರವನ್ನು ಹೆಚ್ಚಿಸಲು ಹಾಗೂ ಅಧಿಕ ಸಂಖ್ಯೆಯ ರೈತರನ್ನು ಸಾಲ ಸೌಲಭ್ಯದ ವ್ಯಾಪ್ತಿಗೆ ಒಳಪಡಿಸಲು ಆರ್ಬಿಐ ಈ ಕ್ರಮ ಕೈಗೊಂಡಿದೆ. ಶುಕ್ರವಾರ ಇಲ್ಲಿ ನಡೆದ ಹಣಕಾಸು ನೀತಿ ಸಭೆಯ ನಂತರ ಈ ಎರಡು ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
ಪ್ರಸ್ತುತ ಬ್ಯಾಂಕುಗಳು ಪ್ರತಿ ಸಾಲಗಾರನಿಗೆ 1.6 ಲಕ್ಷ ರೂ.ಗಳವರೆಗೆ ಮೇಲಾಧಾರ ಅಥವಾ ಅಡಮಾನ ರಹಿತ ಕೃಷಿ ಸಾಲವನ್ನು ನೀಡಬಹುದಾಗಿದೆ. ಈ ಮಿತಿಯನ್ನು 2010 ರಲ್ಲಿ ನಿಗದಿಪಡಿಸಿದ 1 ಲಕ್ಷ ರೂ.ಗಳಿಂದ 2019 ರಲ್ಲಿ 1.6 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು.
"ಒಟ್ಟಾರೆ ಹಣದುಬ್ಬರ ಮತ್ತು ಕೃಷಿ ಇನ್ಪುಟ್ ವೆಚ್ಚಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಅಡಮಾನ ರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಔಪಚಾರಿಕ ಸಾಲ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು" ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಯುಪಿಐ ಮೂಲಕ ಪೂರ್ವ-ಮಂಜೂರಾದ ಕ್ರೆಡಿಟ್ ಲೈನ್ಗಳನ್ನು ಲಿಂಕ್ ಮಾಡಲು ಮತ್ತು ನಿಗದಿತ ವಾಣಿಜ್ಯ ಬ್ಯಾಂಕುಗಳು ಧನಸಹಾಯ ಖಾತೆಯಾಗಿ ಬಳಸಲು ಅನುವು ಮಾಡಿಕೊಡುವ ಮೂಲಕ ಸೆಪ್ಟೆಂಬರ್ 2023 ರಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಆದರೆ ಪೇಮೆಂಟ್ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (ಎಸ್ಎಫ್ ಬಿಗಳು) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.
"ಯುಪಿಐನಲ್ಲಿನ ಕ್ರೆಡಿಟ್ ಲೈನ್ ಸಣ್ಣ ಮೊತ್ತದ, ಕಡಿಮೆ ಅವಧಿಯ ಸಾಲಗಳನ್ನು ಹೊಸದಾಗಿ ಸಾಲ ಪಡೆಯುವ 'ನ್ಯೂ-ಟು-ಕ್ರೆಡಿಟ್' ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಸಮಾಜದ ಅಂಚಿನ ಗ್ರಾಹಕರನ್ನು ತಲುಪಲು ಎಸ್ಎಫ್ಬಿಗಳು ಹೈಟೆಕ್, ಕಡಿಮೆ ವೆಚ್ಚದ ಮಾದರಿಯನ್ನು ಬಳಸಿಕೊಳ್ಳುತ್ತವೆ ಮತ್ತು ಯುಪಿಐನಲ್ಲಿ ಸಾಲದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಸಕ್ರಿಯ ಪಾತ್ರ ವಹಿಸಲಿವೆ" ಎಂದು ಆರ್ಬಿಐ ಹೇಳಿದೆ.
"ಹೀಗಾಗಿ ಯುಪಿಐ ಮೂಲಕ ಪೂರ್ವ-ಮಂಜೂರಾದ ಕ್ರೆಡಿಟ್ ಲೈನ್ಗಳನ್ನು ವಿಸ್ತರಿಸಲು ಎಸ್ಎಫ್ಬಿಗಳಿಗೆ ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ. ಈ ಕುರಿತಾದ ಅಗತ್ಯ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ದೇಶದಲ್ಲಿ ಕಾರ್ಮಿಕರ ಜನಸಂಖ್ಯಾ ಅನುಪಾತ ಶೇ 58ಕ್ಕೆ ಏರಿಕೆ: ನಿರುದ್ಯೋಗ ದರ 3ಕ್ಕೆ ಇಳಿಕೆ- ಸಚಿವೆ ಶೋಭಾ ಕರಂದ್ಲಾಜೆ