ಕರ್ನಾಟಕ

karnataka

ETV Bharat / business

ಪ್ರಯಾಣಿಕರ ಆದ್ಯತೆ ತಿಳಿಯಲು ರೈಲ್ವೆ ಇಲಾಖೆ ಸಮೀಕ್ಷೆ: ವಿಶೇಷ ರೈಲು ಮಾಹಿತಿಯ ಎಸ್​ಎಂಎಸ್​ ರವಾನೆ

ಪ್ರಯಾಣಿಕರ ಆದ್ಯತೆಗಳನ್ನು ತಿಳಿಯಲು ರೈಲ್ವೆ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದೆ.

ರೈಲು
ರೈಲು (IANS)

By ETV Bharat Karnataka Team

Published : 4 hours ago

ನವದೆಹಲಿ: ಕಳೆದ ಒಂದು ವರ್ಷದಲ್ಲಿ ನಿರ್ದಿಷ್ಟ ರಾಜ್ಯಗಳು ಮತ್ತು ನಗರಗಳಲ್ಲಿ ಹಲವಾರು ಬಾರಿ ಪ್ರಯಾಣಿಸಿದ ಪ್ರಯಾಣಿಕರಿಗೆ ಹಬ್ಬದ ವಿಶೇಷ ರೈಲುಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನವಾಗಿ ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಅಂಥ ಪ್ರಯಾಣಿಕರನ್ನು ಗುರುತಿಸಸಲಾಗಿದ್ದು, ಅವರಿಗೆ ವಿಶೇಷ ರೈಲುಗಳು ಮತ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುವ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.

ಸಮೀಕ್ಷೆಯ ಬಗ್ಗೆ ಈಟಿವಿ ಭಾರತಗೆ ವಿವರಿಸಿದ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಶೇಖರ್ ಉಪಾಧ್ಯಾಯ, "ರೈಲ್ವೆ ಇಲಾಖೆ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಆದರೆ ಇಂಥ ರೈಲುಗಳಲ್ಲಿ ಪ್ರಯಾಣಿಸಲು ಬಯಸುವ ಅನೇಕರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ಅವರು ಸಾಮಾನ್ಯ ರೈಲುಗಳಲ್ಲಿಯೇ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸುತ್ತಾರೆ. ಆದರೆ ಆಸನಗಳ ಲಭ್ಯತೆಯ ಕೊರತೆಯಿಂದಾಗಿ ಅವರು ಕೊನೆಯ ಕ್ಷಣದಲ್ಲಿ ತಮ್ಮ ಪ್ರಯಾಣದ ಯೋಜನೆಯನ್ನು ಕೈಬಿಡಬೇಕಾಗುತ್ತದೆ. ಇನ್ನು ವಿಶೇಷ ರೈಲುಗಳ ಬಗ್ಗೆ ಅವರಿಗೆ ಗೊತ್ತಿಲ್ಲದಿರುವುದರಿಂದ ಅವರು ಆ ರೈಲುಗಳಲ್ಲಿಯೂ ಟಿಕೆಟ್ ಬುಕ್ ಮಾಡುತ್ತಿಲ್ಲ." ಎಂದರು.

ಸಮೀಕ್ಷೆಯಲ್ಲಿ, ಕಳೆದ ವರ್ಷದಲ್ಲಿ ಒಂದು ನಿರ್ದಿಷ್ಟ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಲವಾರು ಬಾರಿ ಪ್ರಯಾಣಿಸಿದ ಲಕ್ಷಾಂತರ ಪ್ರಯಾಣಿಕರನ್ನು ರೈಲ್ವೆ ಸಂದರ್ಶಿಸಿದೆ.

"ಕಳೆದ ಒಂದು ವರ್ಷದಲ್ಲಿ ನಿರ್ದಿಷ್ಟ ರಾಜ್ಯಗಳು ಮತ್ತು ನಗರಗಳಲ್ಲಿ ಪ್ರಯಾಣಿಸಿದ ಜನರ ಪ್ರಯಾಣದ ಮಾದರಿಗಳು ಮತ್ತು ಪ್ರಯಾಣಿಕರ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಮಾಹಿತಿಗಳನ್ನು ಪಡೆದ ನಂತರ, ರೈಲ್ವೆ ಟೆಲಿಕಾಂ ಇಲಾಖೆಯ ಸಹಾಯದಿಂದ ಅಂತಹ 50 ಲಕ್ಷ ಪ್ರಯಾಣಿಕರಿಗೆ ವಿಶೇಷ ರೈಲುಗಳ ಸೌಲಭ್ಯ ಮತ್ತು ಅವರ ಮಾರ್ಗಗಳಲ್ಲಿ ಲಭ್ಯತೆಯ ಬಗ್ಗೆ ತಿಳಿಸಲು ಸಂದೇಶಗಳನ್ನು ಕಳುಹಿಸುತ್ತಿದೆ." ಎಂದು ಉಪಾಧ್ಯಾಯ ಮಾಹಿತಿ ನೀಡಿದರು.

"ಎಸ್ಎಂಎಸ್ ಸಂದೇಶದಲ್ಲಿ ಹಬ್ಬಗಳನ್ನು ನಿಮ್ಮ ಕುಟುಂಬದೊಂದಿಗೆ ಆಚರಿಸಿ ಎಂದು ಶುಭಾಶಯ ಕೋರಲಾಗಿದ್ದು, ಇತರ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ರೈಲ್ವೆ ಕಳುಹಿಸುತ್ತಿರುವ ಎಸ್ಎಂಎಸ್ ಗಳಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿವೆ ಮತ್ತು ವಿಶೇಷ ರೈಲುಗಳಲ್ಲಿ ಟಿಕೆಟ್ ಬುಕಿಂಗ್ ಸಂಖ್ಯೆ ಈಗ ಹೆಚ್ಚಾಗಿದೆ" ಎಂದು ಅವರು ತಿಳಿಸಿದರು.

ದೇಶಾದ್ಯಂತ ಹಬ್ಬದ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಪ್ರತಿದಿನ 2 ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು 7,000 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಅಕ್ಟೋಬರ್ 1 ರಿಂದ ನವೆಂಬರ್ 30 ರವರೆಗೆ ಹಬ್ಬದ ಅವಧಿಯಲ್ಲಿ ರೈಲ್ವೆ ಒಂದು ಕೋಟಿ ಪ್ರಯಾಣಿಕರನ್ನು ಸಾಗಿಸಲು ಸಜ್ಜಾಗಿದೆ. 7,000 ಪೂಜಾ, ದೀಪಾವಳಿ ಮತ್ತು ಛತ್ ವಿಶೇಷ ರೈಲುಗಳನ್ನು ನಿಯೋಜಿಸಲಿದೆ. ಇದು ಕಳೆದ ವರ್ಷ ಓಡಿದ 4,429 ರೈಲುಗಳಿಗಿಂತ 60 ಪ್ರತಿಶತದಷ್ಟು ಹೆಚ್ಚಾಗಿದೆ.

ಈ ರೈಲುಗಳಲ್ಲಿ ಎಸಿ ವಿಶೇಷಗಳು, ಎಸಿ, ಸ್ಲೀಪರ್ ಮತ್ತು ಸಾಮಾನ್ಯ ಬೋಗಿಗಳ ಮಿಶ್ರ ಸಂಯೋಜನೆಯ ರೈಲುಗಳು ಮತ್ತು ಕಾಯ್ದಿರಿಸದ ವಿಶೇಷ ರೈಲುಗಳು ಸೇರಿವೆ. ಈ ಹಬ್ಬದ ವಿಶೇಷ ರೈಲುಗಳನ್ನು ವಿವಿಧ ರೈಲ್ವೆ ವಲಯಗಳಿಂದ ದೇಶಾದ್ಯಂತ ವಿವಿಧ ಸ್ಥಳಗಳಿಗೆ ಓಡಿಸಲಾಗುತ್ತಿದೆ. ಈ ರೈಲುಗಳು ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ಯೋಜಿಸಲು ಸಹಾಯ ಮಾಡುತ್ತದೆ ಇದರಿಂದ ತಮ್ಮ ಗಮ್ಯಸ್ಥಾನಗಳನ್ನು ಮುಂಚಿತವಾಗಿ ತಲುಪಲು ಸಾಧ್ಯವಾಗುತ್ತದೆ. ಈ ವಿಶೇಷ ರೈಲುಗಳ ಬುಕಿಂಗ್ ಆರಂಭವಾಗಿದೆ ಮತ್ತು ಪ್ರಯಾಣಿಕರು ತಮ್ಮ ಅನುಕೂಲಕರ ದಿನಾಂಕಗಳ ಪ್ರಕಾರ ಟಿಕೆಟ್ ಕಾಯ್ದಿರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : 'ಆಪ್ ಸಬ್ ಕಿ ಆವಾಜ್': ಹೊಸ ರಾಜಕೀಯ ಪಕ್ಷ ಆರಂಭ

ABOUT THE AUTHOR

...view details