ಹೈದರಾಬಾದ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಉನ್ನತಿಗಾಗಿ ಅನೇಕ ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತವೆ. ಅದರಲ್ಲೂ ಕೆಲವು ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರಿಗೆ ನಾನಾ ಕೌಶಲಗಳನ್ನು ಕಲಿಸಿ ಅವರ ಕಾಲ ಮೇಲೆ ನಿಲ್ಲುವಂತೆ ಮಾಡಲಾಗುತ್ತಿದೆ. ಆದರೆ, ಯಾವುದೇ ವ್ಯಾಪಾರ ಮಾಡುವುದಾಗಲಿ ಅಥವಾ ಬೇರೆ ಕೆಲಸ ಮಾಡುವುದಾಗಲಿ ಎಲ್ಲದಕ್ಕೂ ಹಣ ಬೇಕೇ ಬೇಕು. ಅಂತಹವರ ನೆರವಿಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಬ್ಯಾಂಕ್ ಸಾಲ ಪಡೆಯಲು ಇರುವ ಅಡೆ ತಡೆಗಳನ್ನು ನಿವಾರಿಸಲು ಮುಂದಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸ ಪೋರ್ಟಲ್ ಆರಂಭಿಸಿದೆ. ಯಾರ ಮಧ್ಯಸ್ಥಿಕೆಯೂ ಇಲ್ಲದೇ ಬ್ಯಾಂಕ್‌ಗಳಿಗೂ ಕೂಡಾ ಹೋಗದೇ, ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಲ ಸಿಗುತ್ತದೆ. ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ 15 ಲಕ್ಷ ರೂಗಳವರೆಗೆ ಸಾಲ ಪಡೆಯಲು ಸಾಧ್ಯ. ಹಾಗಾದರೆ ಆ ಪೋರ್ಟಲ್ ಯಾವುದು? ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಗೆ ಯಾರು ಅರ್ಹರು? ಎಂಬುದನ್ನು ಈಗ ತಿಳಿದುಕೊಳ್ಳೋಣ.
ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತೆ: ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಮಾರ್ಚ್ 13 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ಪಿಎಂ ಸೂರಜ್ ಪೋರ್ಟಲ್' ಅನ್ನು ಪ್ರಾರಂಭಿಸಿದ್ದಾರೆ. ಈ ಪೋರ್ಟಲ್ ಮೂಲಕ, ದೇಶದ ಪರಿಶಿಷ್ಟ ಜಾತಿಗಳು, ಹಿಂದುಳಿದ ವರ್ಗಗಳು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸಾಲವನ್ನು ನೀಡಲಾಗುತ್ತದೆ. ಸಾಲ ಪಡೆಯಲು ಯಾವುದೇ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ. ಪಿಎಂ ಸೂರಜ್ ಪೋರ್ಟಲ್ಗೆ ತೆರಳಿ ಅಗತ್ಯ ವಿವರಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿದರೆ ಸಾಕು. ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸಾಲ ನೀಡಲಾಗುವುದು. ಈ ವೆಬ್‌ಸೈಟ್ ಅನ್ನು ನೀವು ಸುಲಭವಾಗಿ ಪ್ರವೇಶಿಸಬಹುದು. ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ. ಈ ಯೋಜನೆಗೆ ಅರ್ಹರಾಗಿರುವವರಿಗೆ 1 ಲಕ್ಷ ರೂ. ವರೆಗಿನ ವೈಯಕ್ತಿಕ ಸಾಲ ಮತ್ತು 15 ಲಕ್ಷದವರೆಗಿನ ವ್ಯಾಪಾರ ಸಾಲವನ್ನು ಒದಗಿಸಲಾಗುತ್ತದೆ. ಆದಾಗ್ಯೂ ಪಿಎಂ ಸೂರಜ್ ಪೋರ್ಟಲ್ ಮೂಲಕ ಸಾಲ ಪಡೆಯಲು ಅರ್ಜಿದಾರರು ಭಾರತೀಯರಾಗಿರಬೇಕು.
PM ಸೂರಜ್ ಪೋರ್ಟಲ್‌ನಲ್ಲಿ ಸಾಲ ಪಡೆಯಲು ಅಗತ್ಯವಿರುವ ಪ್ರಮಾಣಪತ್ರಗಳು:
- ಆಧಾರ್ ಕಾರ್ಡ್
- ಗುರುತಿನ ಚೀಟಿ
- ಪಡಿತರ ಚೀಟಿ
- ವಿಳಾಸ ಪುರಾವೆ
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ಪಾಸ್ ಪುಸ್ತಕ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಇ-ಮೇಲ್ ಐಡಿ
ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ https://sbms.ncog.gov.inಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿ ವಿವರಗಳನ್ನು ಪಡೆದುಕೊಳ್ಳಿ.