ಮುಂಬೈ: ಸೆಪ್ಟೆಂಬರ್ ತಿಂಗಳಲ್ಲಿ (ವರ್ಷದಿಂದ ವರ್ಷಕ್ಕೆ) ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ವಾಹನಗಳ ಮಾರಾಟ ಶೇ.16ರಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಯು ರಫ್ತು ಸೇರಿದಂತೆ ಒಟ್ಟು 87,839 ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 51,062 ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಿದೆ. ಇದು ಶೇಕಡಾ 24ರಷ್ಟು ಬೆಳವಣಿಗೆಯಾಗಿದೆ. ಕಂಪನಿಯ ವಾಣಿಜ್ಯ ವಾಹನಗಳ ದೇಶೀಯ ಮಾರಾಟವು 23,706ರಷ್ಟಿದೆ.
ಸೆಪ್ಟೆಂಬರ್ ತಿಂಗಳಲ್ಲಿ, ಮಹೀಂದ್ರಾ 3,027 ವಾಹನಗಳನ್ನು ರಫ್ತು ಮಾಡಿದ್ದು, ಇದು ಕಳೆದ ವರ್ಷದ 2,419 ವಾಹನಗಳಿಗೆ ಹೋಲಿಸಿದರೆ ಶೇಕಡಾ 25ರಷ್ಟು ಬೆಳವಣಿಗೆಯಾಗಿದೆ. ಈ ವರ್ಷ ಇಲ್ಲಿಯವರೆಗೆ, ಕಂಪನಿಯು 14,727 ವಾಹನಗಳನ್ನು ರಫ್ತು ಮಾಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 3ರಷ್ಟು ಬೆಳವಣಿಗೆಯಾಗಿದೆ.
ಈ ಕುರಿತು ಮಾತನಾಡಿದ ಮಹೀಂದ್ರಾ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ನಕ್ರಾ, "ಸೆಪ್ಟೆಂಬರ್ನಲ್ಲಿ 51,062 ಎಸ್ಯುವಿಗಳನ್ನು ಮಾರಾಟ ಮಾಡಲಾಗಿದ್ದು, ಇದು ಶೇಕಡಾ 24ರಷ್ಟು ಬೆಳವಣಿಗೆಯಾಗಿದೆ. ಒಟ್ಟು 87,839 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಇದು ಶೇಕಡಾ 16 ರಷ್ಟು ಬೆಳವಣಿಗೆಯಾಗಿದೆ" ಎಂದರು.
"ಈ ತಿಂಗಳು, ನಾವು ಭಾರತದ ಮೊದಲ ಮಲ್ಟಿ-ಎನರ್ಜಿ ಮಾಡ್ಯುಲರ್ ಸಿವಿ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ ಎಲ್ ಸಿವಿ <3.5 ಟನ್ ವಿಭಾಗದಲ್ಲಿ ಹೊಸ ವೀರೊ ಹೆಸರಿನ ವಾಹನವನ್ನು ಬಿಡುಗಡೆ ಮಾಡಿದ್ದೇವೆ" ಎಂದು ಅವರು ಹೇಳಿದರು.