ಕರ್ನಾಟಕ

karnataka

ETV Bharat / business

ಮೂಲಸೌಕರ್ಯ ನಿರ್ಮಾಣಕ್ಕೆ ಕಡಿಮೆ ವೆಚ್ಚದ ತಂತ್ರಜ್ಞಾನ ಅಭಿವೃದ್ಧಿ ಅಗತ್ಯ: ಸಚಿವ ಗಡ್ಕರಿ - INFRASTRUCTURE DEVELOPMENT

ಕಡಿಮೆ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ತಂತ್ರಜ್ಞಾನವನ್ನು ತಯಾರಿಸಬೇಕಿದೆ ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ.

ಅಸೋಚಾಮ್ ಕಾರ್ಯಕ್ರಮದಲ್ಲಿ ಸಚಿವ ಗಡ್ಕರಿ ಮಾತನಾಡಿದರು.
ನವದೆಹಲಿಯಲ್ಲಿ ನಡೆದ ಅಸೋಚಾಮ್ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿದರು. (IANS)

By ETV Bharat Karnataka Team

Published : Dec 17, 2024, 7:59 PM IST

ನವದೆಹಲಿ:"ಮೂಲಸೌಕರ್ಯ ಅಭಿವೃದ್ಧಿಯು ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ ಮತ್ತು ಮೂಲಸೌಕರ್ಯ ನಿರ್ಮಾಣದ ತಂತ್ರಜ್ಞಾನವನ್ನು ಆರ್ಥಿಕವಾಗಿ ಕಾರ್ಯಸಾಧ್ಯ ಮತ್ತು ಸುರಕ್ಷಿತವಾಗಿಸಬೇಕಾಗಿದೆ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಅಸೋಚಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, "ನೀರು, ವಿದ್ಯುತ್, ಸಾರಿಗೆ ಮತ್ತು ಸಂವಹನ ಕ್ಷೇತ್ರದಲ್ಲಿನ ಬೆಳವಣಿಗೆಗಳು ನಮ್ಮ ದೇಶಕ್ಕೆ ಬಹಳ ಮುಖ್ಯ. ಅಂಥ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು" ಎಂದು ಹೇಳಿದರು.

"ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ರಸ್ತೆ ಮೂಲಸೌಕರ್ಯ ಮತ್ತು ಸುರಂಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ವಾಹನೋದ್ಯಮ ಮತ್ತು ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ಹೂಡಿಕೆಗಳು ಬರಲಿವೆ. ಸೇತುವೆಗಳು ಮತ್ತು ಸುರಂಗಗಳ ನಿರ್ಮಾಣ ಬಹಳ ನಿರ್ಣಾಯಕ ಕೆಲಸಗಳಾಗಿವೆ ಮತ್ತು ಇವುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ವೆಚ್ಚವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ" ಎಂದು ಗಡ್ಕರಿ ಹೇಳಿದರು.

ರಸ್ತೆ ಮತ್ತು ಹೆದ್ದಾರಿ ವಲಯದಲ್ಲಿ ಮಾತ್ರವಲ್ಲದೆ ರೈಲ್ವೆ ಜಾಲದಲ್ಲೂ ಸಾಕಷ್ಟು ಸುರಂಗ ಮಾರ್ಗಗಳಿವೆ ಎಂದು ಅವರು ಹೇಳಿದರು. "ಚೀನಾದಿಂದ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವುದು ತೀರಾ ಕ್ಲಿಷ್ಟಕರ. ವಿವಿಧ ರೀತಿಯ ಯಂತ್ರೋಪಕರಣಗಳು ಬೇಕಾಗುವುದರಿಂದ ಇವುಗಳ ವೆಚ್ಚವನ್ನು ಕಡಿಮೆ ಮಾಡುವುದು ವಿಶ್ವದ ಅಗತ್ಯವಾಗಿದೆ" ಎಂದು ಸಚಿವರು ತಿಳಿಸಿದರು.

"ಭಾರತದ ಪ್ರಮುಖ ಸುರಂಗ ಯೋಜನೆಗಳಲ್ಲಿ ಒಂದಾದ 14.2 ಕಿಲೋ ಮೀಟರ್ ಉದ್ದ ಜೋಜಿಲಾ ಸುರಂಗವನ್ನು 6,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದರ ಶೇಕಡಾ 55 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದು ಜೋಜಿಲಾ ಪಾಸ್ ಅಡಿಯಲ್ಲಿ ಸುಮಾರು 9,800 ಅಡಿ ಎತ್ತರದಲ್ಲಿರುವ ಏಷ್ಯಾದ ಪ್ರಮುಖ ಮತ್ತು ಉದ್ದದ ಸುರಂಗಗಳಲ್ಲಿ ಒಂದಾಗಿದೆ" ಎಂದು ಗಡ್ಕರಿ ಹೇಳಿದರು.

ದೇಶಾದ್ಯಂತ ಹೆದ್ದಾರಿ ಜಾಲವನ್ನು ವಿಸ್ತರಿಸಲು ಮುಂದಿನ ಕೆಲ ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗಳ ಯೋಜಿತ ವೆಚ್ಚದಲ್ಲಿ 74 ಹೊಸ ಸುರಂಗಗಳನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ. ಸರ್ಕಾರ ಈಗಾಗಲೇ 15,000 ಕೋಟಿ ರೂ.ಗಳ ವೆಚ್ಚದಲ್ಲಿ 49 ಕಿ.ಮೀ ಉದ್ದದ 35 ಸುರಂಗಗಳನ್ನು ಪೂರ್ಣಗೊಳಿಸಿದೆ ಮತ್ತು ಈಗ 273 ಕಿ.ಮೀ ಉದ್ದದ ಹೊಸ ಸುರಂಗಗಳನ್ನು ನಿರ್ಮಿಸಲು ಯೋಜಿಸಿದೆ. ಈ ವರ್ಷದ ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ 825 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ಉದ್ಘಾಟಿಸಿದರು.

ಇದನ್ನೂ ಓದಿ :ಷೇರು ಮಾರುಕಟ್ಟೆಯಲ್ಲಿ ಪತನ: ಸೆನ್ಸೆಕ್ಸ್​ 1064 & ನಿಫ್ಟಿ 332 ಅಂಕ ಕುಸಿತ - STOCK MARKET TODAY

ABOUT THE AUTHOR

...view details