ಕರ್ನಾಟಕ

karnataka

ETV Bharat / business

ಶೀಘ್ರವೇ ಎಲ್ಐಸಿಯಿಂದ ಆರೋಗ್ಯ ವಿಮಾ ಸೇವೆ ನಿರೀಕ್ಷೆ: ಪಾಲಿಸಿಗಳು ಮತ್ತಷ್ಟು ಅಗ್ಗ? - lic health insurance - LIC HEALTH INSURANCE

ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ವು ಶೀಘ್ರದಲ್ಲೇ ಆರೋಗ್ಯ ವಿಮಾ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಇದು ಜಾರಿಯಾದರೆ, ಅಗ್ಗದ ಪಾಲಿಸಿಗಳು ಲಭ್ಯವಾಗುವ ನಿರೀಕ್ಷೆ ಇದೆ.

LIC Health Insurance
ಎಲ್ಐಸಿ ಆರೋಗ್ಯ ವಿಮೆ (Getty Images)

By ETV Bharat Karnataka Team

Published : May 29, 2024, 6:28 PM IST

ಸಾರ್ವಜನಿಕ ವಲಯದ ದೈತ್ಯ ಜೀವ ವಿಮಾ ಕಂಪನಿ ಎಲ್‌ಐಸಿ ಮುಂದಿನ ದಿನಗಳಲ್ಲಿ ಆರೋಗ್ಯ ವಿಮಾ ಸೇವೆ ಒದಗಿಸುವ ಸಾಧ್ಯತೆಯಿದೆ. ಆರೋಗ್ಯ ವಿಮಾ ವ್ಯವಹಾರಕ್ಕೆ ಪ್ರವೇಶಿಸಿದರೆ, ಆ ವಲಯದಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಕಂಪನಿಗಳು ಎಲ್ಐಸಿಯೊಂದಿಗೆ ವಿಲೀನಗೊಳ್ಳಲು ಅಥವಾ ಇದನ್ನು ಖರೀದಿಸಲು ಒಲವು ತೋರುತ್ತವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸದ್ಯ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಆರೋಗ್ಯ ವಿಮಾ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹೊಂದಿದೆ ಎಂಬ ಅಧ್ಯಕ್ಷ ಸಿದ್ಧಾರ್ಥ ಮೊಹಾಂತಿ ಅವರ ಹೇಳಿಕೆಯೇ ಈ ಹೊಸ ಚರ್ಚೆಗೆ ಕಾರಣವಾಗಿದೆ. 2023-24ನೇ ಹಣಕಾಸು ವರ್ಷದ ಎಲ್‌ಐಸಿಯ ಹಣಕಾಸು ಮಾಹಿತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು, ಆರೋಗ್ಯ ವಿಮಾ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಎಲ್‌ಐಸಿಗೆ ಅನುಮತಿಯನ್ನು ನೀಡಿದರೆ, ಹೇಗೆ ಮುನ್ನಡೆಯಬೇಕು ಎಂಬುದರ ಕುರಿತು ನಾವು ಈಗಾಗಲೇ ಆಂತರಿಕ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಸೂಕ್ತ ಭವಿಷ್ಯದ ಯೋಜನೆ ರೂಪಿಸಿ ವಿಮಾ ಸೇವೆಯನ್ನು ವಿಸ್ತರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ (2023-2024ನೇ ಸಾಲಿನ) 2,04,28,937 ಪಾಲಿಸಿಗಳನ್ನು ಮಾರಾಟ ಮಾಡಲಾಗಿದೆ. ಎಲ್​ಐಸಿ ಪ್ರತಿ ಷೇರಿಗೆ 6 ರೂಪಾಯಿ ಅಂತಿಮ ಡಿವಿಡೆಂಡ್ ನೀಡಲು ಕಂಪನಿಯ ಆಡಳಿತ ಮಂಡಳಿ ಇತ್ತೀಚೆಗೆ ಶಿಫಾರಸು ಮಾಡಿದೆ. ಕಳೆದ ವರ್ಷವೂ ಪ್ರತಿ ಷೇರಿಗೆ 4 ರೂ.ಗಳ ಮಧ್ಯಂತರ ಲಾಭಾಂಶವನ್ನು ಪಾವತಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಷೇರುದಾರರು ಪ್ರತಿ ಎಲ್​ಐಸಿ ಷೇರಿಗೆ 10 ರೂ.ವರೆಗೆ ಲಾಭಾಂಶವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಸಂಸದೀಯ ಸಮಿತಿಯ ಶಿಫಾರಸು: ವಿಮಾ ಕಂಪನಿಗಳು ಪ್ರಸ್ತುತ ಮೂರು ವಿಭಾಗಗಳಲ್ಲಿ ಸೇವೆಗಳನ್ನು ಒದಗಿಸುತ್ತಿವೆ. ಅವುಗಳೆಂದರೆ ಜೀವ ವಿಮೆ, ಸಾಮಾನ್ಯ ವಿಮೆ ಮತ್ತು ಆರೋಗ್ಯ ವಿಮೆ. ವಿಮಾ ಕಾಯ್ದೆ-1938ರಡಿ ಪ್ರಸ್ತುತ ಈ ಮೂರು ವ್ಯವಹಾರಗಳನ್ನು ನಡೆಸಲು ಒಬ್ಬನೇ ವಿಮಾದಾರನಿಗೆ ಎಲ್ಲವನ್ನೂ ಕಲ್ಪಿಸಲು ಯಾವುದೇ ಅವಕಾಶವಿಲ್ಲ. ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಸಹ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಸಾಮಾನ್ಯ ವಿಮೆಯನ್ನು ಒಂದೇ ಪಾಲಿಸಿಯಲ್ಲಿ ಒಳಗೊಂಡಿರುವ ಪಾಲಿಸಿಗಳನ್ನು ಇನ್ನೂ ಅನುಮೋದಿಸಿಲ್ಲ. ಆದರೆ, ಈ ನೀತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಬಿಜೆಪಿ ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿ ಹೇಳಿದೆ.

ಈ ವರ್ಷದ ಫೆಬ್ರವರಿಯಲ್ಲಿ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಸಾಮಾನ್ಯ ವಿಮೆಯನ್ನು ಸಂಯೋಜಿಸುವ ಸಂಯೋಜಿತ ವಿಮಾ ಪಾಲಿಸಿಗಳನ್ನು ನೀಡಲು ವಿಮಾ ಕಂಪನಿಗಳಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈ ಸಮಿತಿ ಶಿಫಾರಸು ಮಾಡಿದೆ. ಎಲ್ಲ ಮೂರು ರೀತಿಯ ವಿಮಾ ಸೇವೆಗಳಲ್ಲಿ ಭಾಗವಹಿಸುವುದರಿಂದ ವಿಮಾ ಕಂಪನಿಗಳು ಅಗ್ಗದ ಪಾಲಿಸಿಗಳನ್ನು ಪಡೆಯುತ್ತವೆ. ಇದರಿಂದ ಆಯಾ ವಿಮಾ ಕಂಪನಿಗಳ ಆದಾಯದ ಮೂಲವೂ ಹೆಚ್ಚಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ವಿಮಾ ಕಾಯ್ದೆಯಲ್ಲಿ ಬದಲಾವಣೆಗೂ ಶಿಫಾರಸು ಮಾಡಲಾಗಿದೆ.

ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಈ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಸಂಸದೀಯ ಸಮಿತಿಯ ಶಿಫಾರಸ್ಸಿನಂತೆ ಕ್ರಮ ಕೈಗೊಂಡರೆ ಆರೋಗ್ಯ ವಿಮೆ ವ್ಯವಹಾರ ಆರಂಭಿಸಲು ಎಲ್​ಐಸಿ ಕಂಪನಿಗೆ ಹಾದಿ ಸುಗಮವಾಗಲಿದೆ.

ಇದನ್ನೂ ಓದಿ:ವೃದ್ಧಾಪ್ಯದಲ್ಲಿ ನಿಮ್ಮ ಕೈ ಹಿಡಿಯುವ ಟಾಪ್​ 3 ಪಿಂಚಣಿ ಯೋಜನೆಗಳಿವು

ABOUT THE AUTHOR

...view details