ಕರ್ನಾಟಕ

karnataka

ETV Bharat / business

ದೇಶದ ಕಲ್ಲಿದ್ದಲು ಉತ್ಪಾದನೆ ಶೇ 27ರಷ್ಟು ಏರಿಕೆ

ಕಳೆದೊಂದು ವರ್ಷದಲ್ಲಿ ದೇಶದ ಕಲ್ಲಿದ್ದಲು ಉತ್ಪಾದನೆಯು ಶೇ 27ರಷ್ಟು ಏರಿಕೆಯಾಗಿದೆ.

Coal production from captive, commercial mines jumps by 27 pc
Coal production from captive, commercial mines jumps by 27 pc

By ETV Bharat Karnataka Team

Published : Mar 3, 2024, 7:12 PM IST

ನವದೆಹಲಿ:ಏಪ್ರಿಲ್ 1, 2023 ರಿಂದ ಫೆಬ್ರವರಿ 29, 2024 ರ ಅವಧಿಯಲ್ಲಿ ದೇಶದ ಕ್ಯಾಪ್ಟಿವ್ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಒಟ್ಟು ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ 126.80 ಮಿಲಿಯನ್ ಟನ್ ಮತ್ತು 128.88 ಮಿಲಿಯನ್ ಟನ್​ಗಳಿಗೆ ಏರಿದೆ ಎಂದು ಕಲ್ಲಿದ್ದಲು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕ್ರಮವಾಗಿ ಶೇಕಡಾ 27.06 ಮತ್ತು 29.14 ರಷ್ಟು ಹೆಚ್ಚಳವಾಗಿದೆ. ತಾವು ಗಣಿಗಾರಿಕೆ ನಡೆಸಿದ ಕಲ್ಲಿದ್ದಲನ್ನು ಸ್ವತಃ ತಮಗೆ ಮಾತ್ರ ಬಳಸಿಕೊಳ್ಳುವ ಹಾಗೂ ಹೊರಗೆ ಮಾರಾಟ ಮಾಡದ ಗಣಿ ಕಂಪನಿಗಳನ್ನು ಕ್ಯಾಪ್ಟಿವ್ ಗಣಿಗಾರಿಕೆ ಕಂಪನಿಗಳೆಂದು ಕರೆಯಲಾಗುತ್ತದೆ.

ಕಲ್ಲಿದ್ದಲು ಉತ್ಪಾದನೆಯಲ್ಲಿನ ಬೆಳವಣಿಗೆಯು ಭಾರತದ ಇಂಧನ ಭದ್ರತೆಯನ್ನು ಖಾತರಿಪಡಿಸುವ ಮತ್ತು ಕಲ್ಲಿದ್ದಲು ಆಮದಿನ ಮೇಲಿನ ರಾಷ್ಟ್ರದ ಅವಲಂಬನೆಯನ್ನು ಕಡಿಮೆ ಮಾಡುವ ಉನ್ನತ ದಕ್ಷತೆಯ ಮತ್ತು ಬಲವಾದ ಲಾಜಿಸ್ಟಿಕ್ಸ್ ಜಾಲವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನಗಳು ಸ್ವಾವಲಂಬನೆಯನ್ನು ಉತ್ತೇಜಿಸುವ ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬೆಂಬಲಿಸುವ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿವೆ ಎಂದು ಸಚಿವಾಲಯ ತಿಳಿಸಿದೆ.

ವಾಣಿಜ್ಯ ಗಣಿಗಳ ಪಾರದರ್ಶಕ ಇ-ಹರಾಜಿನಂಥ ಕ್ರಮಗಳನ್ನು ಒಳಗೊಂಡ ನೀತಿ ಸುಧಾರಣೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಫೆಬ್ರವರಿ 29 ರ ಹೊತ್ತಿಗೆ, ಒಟ್ಟು ಉತ್ಪಾದನಾ ಗಣಿಗಳ ಸಂಖ್ಯೆ 54 ಆಗಿದ್ದು, 35 ವಿದ್ಯುತ್ ವಲಯಕ್ಕೆ, 11 ನಿಯಂತ್ರಿತವಲ್ಲದ ವಲಯಕ್ಕೆ ಮತ್ತು ಎಂಟು ಗಣಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಮಾರಾಟಕ್ಕೆ ಹಂಚಿಕೆ ಮಾಡಲಾಗಿದೆ. ವಾಣಿಜ್ಯ ಕಲ್ಲಿದ್ದಲು ಹರಾಜಿನಲ್ಲಿ 91 ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದ್ದು, ಅದರಲ್ಲಿ ಏಳು ಗಣಿಗಳು ಈಗಾಗಲೇ ಕಲ್ಲಿದ್ದಲು ಉತ್ಪಾದನೆಯನ್ನು ಪ್ರಾರಂಭಿಸಿವೆ.

2024 ರ ಫೆಬ್ರವರಿ ತಿಂಗಳಲ್ಲಿ ಒಟ್ಟು ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ ಕ್ರಮವಾಗಿ 14.85 ಮಿಲಿಯನ್ ಟನ್ (ಎಂಟಿ) ಮತ್ತು 12.95 ಮಿಲಿಯನ್ ಟನ್ ಆಗಿದ್ದು, 2022-23ರ ಹಣಕಾಸು ವರ್ಷದ ಇದೇ ತಿಂಗಳಲ್ಲಿ ಇದ್ದ 10.85 ಮೆಟ್ರಿಕ್ ಟನ್ ಮತ್ತು 9.72 ಮೆಟ್ರಿಕ್ ಟನ್​ಗೆ ಹೋಲಿಸಿದರೆ ಕ್ರಮವಾಗಿ ಶೇಕಡಾ 37 ಮತ್ತು 33 ರಷ್ಟು ಹೆಚ್ಚಳವಾಗಿದೆ. ಸರಾಸರಿ ದೈನಂದಿನ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ ದರವು ದಿನಕ್ಕೆ ಕ್ರಮವಾಗಿ 5.12 ಲಕ್ಷ ಟನ್ ಮತ್ತು 4.46 ಲಕ್ಷ ಟನ್ ಆಗಿದ್ದು, ಸ್ಥಿರ ಕಾರ್ಯಕ್ಷಮತೆಯನ್ನು ಹೊಂದಿದೆ.

ಇದನ್ನೂ ಓದಿ : 320 ಲಕ್ಷ ಟನ್ ಗೋಧಿ, 6 ಲಕ್ಷ ಟನ್ ಸಿರಿಧಾನ್ಯ ದಾಸ್ತಾನಿಗೆ ಕೇಂದ್ರ ನಿರ್ಧಾರ

ABOUT THE AUTHOR

...view details