ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಐಷಾರಾಮಿ ಮತ್ತು ಪ್ರೀಮಿಯಂ ಮನೆಗಳ ಮಾರಾಟವು 2019 ರ ಮೊದಲ ತ್ರೈಮಾಸಿಕದಲ್ಲಿ ಇದ್ದ ಶೇಕಡಾ 7 ರಿಂದ 2024 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 21 ಕ್ಕೆ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಇದೇ ಅವಧಿಯಲ್ಲಿ ಕೈಗೆಟುಕುವ ಬೆಲೆಯ ಮನೆಗಳ ಮಾರಾಟ ಶೇಕಡಾ 20 ರಷ್ಟು ಕುಸಿತವಾಗಿದೆ ಎಂದು ವರದಿ ಶುಕ್ರವಾರ ತೋರಿಸಿದೆ.
ಈ ವರ್ಷದ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ (ಕ್ಯೂ 1) ಅಗ್ರ ಏಳು ನಗರಗಳಲ್ಲಿ 1.30 ಲಕ್ಷ ಮನೆಗಳು ಮಾರಾಟವಾಗಿದ್ದು, ಇದರಲ್ಲಿ ಐಷಾರಾಮಿ ಮನೆಗಳ ಪಾಲು ಶೇಕಡಾ 21 ರಷ್ಟಿದೆ. ಈ ಅವಧಿಯಲ್ಲಿ ಸುಮಾರು 27,070 ಐಷಾರಾಮಿ ಮನೆಗಳು ಮಾರಾಟವಾಗಿವೆ. ಐದು ವರ್ಷಗಳ ಹಿಂದೆ 2019 ರ ಮೊದಲ ತ್ರೈಮಾಸಿಕದಲ್ಲಿ ಈ ಪಾಲು ಕೇವಲ ಶೇಕಡಾ 7 ರಷ್ಟಿತ್ತು. ಮತ್ತೊಂದೆಡೆ 2024 ರ ಮೊದಲ ತ್ರೈಮಾಸಿಕದಲ್ಲಿ ಕೈಗೆಟುಕುವ ದರದ ವಿಭಾಗದಲ್ಲಿ ಸುಮಾರು 26,545 ಮನೆಗಳು ಮಾರಾಟವಾಗಿವೆ.
2024 ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್), ಚೆನ್ನೈ, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಮಧ್ಯಮ ಶ್ರೇಣಿ ಮತ್ತು ಪ್ರೀಮಿಯಂ ವಿಭಾಗದ (40 ಲಕ್ಷ ರೂ.ಗಳಿಂದ 1.5 ಕೋಟಿ ರೂ.ಗಳ ಬೆಲೆಯ ಘಟಕಗಳು) ಮನೆಗಳು ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗಿವೆ.