ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು 8 ತಿಂಗಳ ಕನಿಷ್ಠ ಮಟ್ಟವಾದ ಬ್ಯಾರೆಲ್ಗೆ 75.8 ಡಾಲರ್ಗೆ ಇಳಿದಿರುವುದು ಭಾರತದ ಪಾಲಿಗೆ ವರದಾನವಾಗಿದೆ. ಅಮೆರಿಕ ಮತ್ತು ಚೀನಾದ ಆರ್ಥಿಕತೆಗಳಲ್ಲಿ ಹಿಂಜರಿತ ಉಂಟಾಗುವ ಆತಂಕದಲ್ಲಿ ಶುಕ್ರವಾರದಿಂದ ಈವರೆಗೂ ಕಚ್ಚಾ ತೈಲ ಬೆಲೆಗಳು 4 ಡಾಲರ್ಗಿಂತಲೂ ಹೆಚ್ಚು ಇಳಿಕೆಯಾಗಿವೆ. ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರನಾಗಿರುವ ಭಾರತವು ಇದರಿಂದ ಲಾಭ ಪಡೆಯಲಿದೆ.
ನಿಧಾನಗತಿಯ ಆರ್ಥಿಕತೆಯ ಮಧ್ಯೆ ಯುಎಸ್ ಉದ್ಯೋಗ ದತ್ತಾಂಶವು ನಿರುದ್ಯೋಗ ದರದಲ್ಲಿ ಹೆಚ್ಚಳ ಮತ್ತು ಚೀನಾದ ಇಂಧನ ಬಳಕೆಯು ತೀವ್ರ ಕಡಿಮೆಯಾಗಿರುವುದನ್ನು ತೋರಿಸಿರುವುದು, ಬೇಡಿಕೆ ಕುಸಿತವಾಗುವ ಸಾಧ್ಯತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ತೈಲ ಬೆಲೆಗಳು ಇಳಿಕೆಯಾಗುತ್ತಿವೆ.
ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸೋಮವಾರ ಬ್ಯಾರೆಲ್ಗೆ 1.04 ಡಾಲರ್ಗಿಂತ ಹೆಚ್ಚು ಕುಸಿದು 75.8 ಡಾಲರ್ಗೆ ತಲುಪಿದೆ. ಹಾಗೆಯೇ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕಚ್ಚಾ ತೈಲ ಬೆಲೆಯು ಬ್ಯಾರೆಲ್ಗೆ 72.43 ಡಾಲರ್ಗೆ ಇಳಿಕೆಯಾಗಿದೆ.
ತೈಲ ಬೆಲೆಗಳ ಕುಸಿತವು ಭಾರತೀಯ ಆರ್ಥಿಕತೆಗೆ ಉತ್ತಮವಾಗಿದೆ. ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಸುಮಾರು ಶೇ 85ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ ತೈಲ ಬೆಲೆಗಳು ಕಡಿಮೆಯಾದಾಗ ದೇಶದ ಆಮದು ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇದು ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) ಕಡಿಮೆ ಮಾಡಲು ಮತ್ತು ರೂಪಾಯಿ ಬಲವರ್ಧನೆಗೆ ಸಹಕಾರಿಯಾಗುತ್ತದೆ.