ನವದೆಹಲಿ:ಕೇಂದ್ರ ಸರ್ಕಾರವು 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು ಜಿಬೌಟಿ ದೇಶಕ್ಕೆ 30 ಸಾವಿರ ಟನ್, ಗಿನಿಯಾ ಬಿಸ್ಸೌ ದೇಶಕ್ಕೆ 50 ಸಾವಿರ ಟನ್ ನುಚ್ಚು ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ. ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರಗಳ ಮಹಾ ನಿರ್ದೇಶನಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ದೇಶದಲ್ಲಿ ಅಕ್ಕಿ ಪೂರೈಕೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಣದಲ್ಲಿಡುವ ಸಲುವಾಗಿ 2023ರ ಜುಲೈ 20 ರಿಂದ ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಬಿಳಿ ಅಕ್ಕಿ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಆದಾಗ್ಯೂ, ಈ ಹಿಂದೆ ಭಾರತವು ನೇಪಾಳ, ಕ್ಯಾಮರೂನ್, ಕೋಟ್ ಡಿ ಐವೊರ್, ರಿಪಬ್ಲಿಕ್ ಆಫ್ ಗಿನಿಯಾ, ಮಲೇಷ್ಯಾ, ಫಿಲಿಪೈನ್ಸ್, ಸೀಶೆಲ್ಸ್, ಯುಎಇ, ಸಿಂಗಾಪುರ್, ಕೊಮೊರೊಸ್, ಮಡಗಾಸ್ಕರ್, ಈಕ್ವೆಟೋರಿಯಲ್ ಗಿನಿಯಾ, ಈಜಿಪ್ಟ್ ಮತ್ತು ಕೀನ್ಯಾಕ್ಕೆ ಅಕ್ಕಿ ರಫ್ತು ಮಾಡಲು ಅನುಮತಿ ನೀಡಿತ್ತು.
ಆರಂಭದಲ್ಲಿ ಅಕ್ಕಿ ರಫ್ತು ನೀತಿ ತಿದ್ದುಪಡಿ ಮಾಡುವಾಗ, ಇತರ ದೇಶಗಳಿಗೆ ತಮ್ಮ ಆಹಾರ ಭದ್ರತಾ ಅಗತ್ಯಗಳನ್ನು ಪೂರೈಸಲು ಸರ್ಕಾರ ನೀಡಿದ ಅನುಮತಿ ಆಧಾರದ ಮೇಲೆ ಮತ್ತು ಅವರ ಸರ್ಕಾರದ ಕೋರಿಕೆ ಆಧಾರದ ಮೇಲೆ ರಫ್ತು ಮಾಡಲು ಅನುಮತಿಸಲಾಗುವುದು ಎಂದು ಡಿಜಿಎಫ್ಟಿ ಸಮರ್ಥಿಸಿಕೊಂಡಿತ್ತು. ಪಶ್ಚಿಮ ಆಫ್ರಿಕಾದ ದೇಶ ಬೆನಿನ್ ಭಾರತದಿಂದ ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಯುಎಇ, ನೇಪಾಳ, ಬಾಂಗ್ಲಾದೇಶ, ಚೀನಾ, ಕೋಟ್ ಡಿ ಐವೊರ್, ಟೋಗೊ, ಸೆನೆಗಲ್, ಗಿನಿಯಾ, ವಿಯೆಟ್ನಾಂ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್ ಸೊಮಾಲಿಯಾ, ಮಲೇಷ್ಯಾ ಮತ್ತು ಲೈಬೀರಿಯಾ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುವ ಇತರ ಪ್ರಮುಖ ದೇಶಗಳಾಗಿವೆ.